ರಾಯಚೂರು: ಸಿದ್ದರಾಮಯ್ಯನವರಿಗೆ ಉದ್ಯೋಗ ಇಲ್ಲ. ಚಾಮುಂಡಿಯಲ್ಲಿ ಸೋತರು, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಈಗ ಅವರಿಗೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಬರ ವೀಕ್ಷಣೆಗೆ ರಾಯಚೂರಿಗೆ ಆಗಮಿಸಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸತ್ತುಹೋಗಿದೆ. ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರು. ಹಾಗಂದರೆ ಏನು? ಅಮ್ಮಾವ್ರ ಗಂಡನಾ? ಈ ಸರ್ಕಾರದಲ್ಲಿ ನಿಮ್ಮದೇನು ನಡೆಯೋದಿಲ್ಲವಾ ಎಂದು ವ್ಯಂಗ್ಯವಾಡಿದರು. ರೈತರ ಸಮಸ್ಯೆ ಪರಿಹಾರ ಮಾಡಲು ನಿಮಗೆಲ್ಲ ಸಾಧ್ಯವೇ ಇಲ್ಲವಾ ಎಂದು ಹೇಳಿದರು.
ಬರುವವರಿಗೆ ಬೇಡ ಎನ್ನುವುದಿಲ್ಲ
ನಾವು ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ನಾವು ಕರೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಹೌದು, ಬರುತ್ತೇವೆ ಎನ್ನುವವರಿಗೆ ನಾವು ಬೇಡ ಎನ್ನುವುದಿಲ್ಲ. ನಾವೇನೂ ಸನ್ಯಾಸಿಗಳಲ್ಲ. ಕಾಂಗ್ರೆಸ್ನ 8 ಶಾಸಕರಲ್ಲಿ ಅಸಮಾಧಾನವಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿಯವರೇ ಹೇಳಿದ್ದಾರೆ. ಸಾಧ್ಯವಾದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಬಿಜೆಪಿ ಬೆಳೆಯುತ್ತಿದೆ. ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ನಾವು ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲೇ ಲೋಕಸಭೆ ಚುನಾವಣೆ ಎದುರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಮಮಂದಿರ ಕಟ್ಟುತ್ತೇವೆ
ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದೆವು. ಅದರಂತೆ ಮುಂದುವರಿಯುತ್ತಿದ್ದೇವೆ. ಅಲ್ಲಿ ಬಾಬರ್ ಕಟ್ಟಿದ ಮಸೀದಿಗೆ ಬಾಬ್ರಿ ಮಸೀದಿ ಎಂದು ಹೆಸರು ಬಂದಿತ್ತು. ಅದು ಗುಲಾಮಗಿರಿಯ ಸಂಕೇತ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಹಿಂದುತ್ವ, ರಾಮಮಂದಿರವನ್ನು ವಿರೋಧಿಸಿದ್ದರಿಂದಲೇ ಈಗ 22 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಈಗ ಅವರಿಗೂ ಸತ್ಯ ಅರ್ಥವಾಗಿದೆ. ಹಾಗಾಗಿ ರಾಮಮಂದಿರ ನಿರ್ಮಾಣವಾಗಲಿ ಎಂದು ಹೇಳುತ್ತಿದ್ದಾರೆ ಎಂದರು.