ಆರ್​ಬಿಐಗೆ ಶಕ್ತಿಕಾಂತ

<< 25ನೇ ಗವರ್ನರ್ ಆಗಿ ನೇಮಿಸಿದ ಕೇಂದ್ರ >>

ನವದೆಹಲಿ: ಉರ್ಜಿತ್ ಪಟೇಲ್ ರಾಜೀನಾಮೆಯಿಂದ ತೆರವಾಗಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ತಮಿಳುನಾಡು ಕೇಡರ್​ನ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಆರ್ಥಿಕ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಮಂಗಳವಾರ ನೇಮಕವಾಗಿದ್ದಾರೆ. ಸಂಪುಟ ನೇಮಕಾತಿ ಸಮಿತಿ ಈ ನೇಮಕ ಮಾಡಿದ್ದು, ಅವರ ಅಧಿಕಾರಾವಧಿ ಮೂರು ವರ್ಷಗಳು.

ದಾಸ್, ಜಿ-20 ಒಕ್ಕೂಟದಲ್ಲಿ ಭಾರತದ ಪ್ರತಿನಿಧಿ ಆಗಿದ್ದಾರೆ. ಹಾಗೆಯೇ 15ನೇ ಹಣಕಾಸು ಮಂಡಳಿಯ ಸದಸ್ಯರೂ ಹೌದು. ಕಂದಾಯ ಇಲಾಖೆ ಹಾಗೂ ರಸಗೊಬ್ಬರ ಇಲಾಖೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ವೈಯಕ್ತಿಕ ಕಾರಣ ನೀಡಿ ಸೋಮವಾರ ಉರ್ಜಿತ್ ಪಟೇಲ್ ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ಹಠಾತ್ ಬೆಳವಣಿಗೆ ಹಿನ್ನೆಲೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಸ್ವಾಯತ್ತ ಹಣಕಾಸು ಸಂಸ್ಥೆಯ ಮುಖ್ಯಸ್ಥರಾಗುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಭೆಗೂ ಮುನ್ನ ನೇಮಕ: ಡಿ.14ಕ್ಕೆ ಆರ್​ಬಿಐನ ಕೇಂದ್ರೀಯ ಮಂಡಳಿಯ ಮಹತ್ವದ ಸಭೆ ನಿಗದಿಯಾಗಿದೆ. ಈ ಹಿನ್ನೆಲೆ ಉರ್ಜಿತ್ ರಾಜೀನಾಮೆಯ ಪರಿಣಾಮ ಸಭೆ ಮೇಲೆ ಆಗದಂತೆ ಸರ್ಕಾರ ಶೀಘ್ರವಾಗಿ ಹೊಸ ಗವರ್ನರ್ ನೇಮಿಸಿರುವುದಕ್ಕೆ ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆ. ಒಡಿಶಾದಿಂದ ಆರ್​ಬಿಐ ಗವರ್ನರ್ ಹುದ್ದೆಗೇರಿರುವ ಮೊದಲಿಗರು ನೀವು ಎಂಬ ಹೆಮ್ಮೆ ನಮಗಿದೆ.

| ನವೀನ್ ಪಟ್ನಾಯಕ್, ಒಡಿಶಾ ಸಿಎಂ

ಅಮಾನ್ಯೀಕರಣ ನಿಭಾಯಿಸಿದ್ದ ದಾಸ್

ಮೂಲತಃ ಒಡಿಶಾದವರಾದ ಶಕ್ತಿಕಾಂತ ದಾಸ್, 1980ನೇ ಬ್ಯಾಚ್ ಐಎಎಸ್ ಅಧಿಕಾರಿ. 2017ರ ಮೇವರೆಗೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು. 2016ರ ನ.8ರಂದು ನೋಟು ಅಮಾನ್ಯೀಕರಣ ಘೋಷಣೆಯಾದ ಸಂದರ್ಭ ದೇಶದ ಹಣಕಾಸು ಸ್ಥಿತಿಗತಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಗದು ಕೊರತೆ ಉಂಟಾದಾಗಲೂ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಕಪ್ಪುಹಣ ಹಾಗೂ ಅಘೋಷಿತ ಆದಾಯಕ್ಕೆ ಅಮಾನ್ಯೀಕರಣ ಕ್ರಮದಿಂದ ಬಹಳ ದೊಡ್ಡ ಪೆಟ್ಟು ಬೀಳಲಿದೆ. ಡಿಜಿಟಲ್ ಪಾವತಿಗೆ ಉತ್ತೇಜನ ಸಿಗಲಿದೆ ಎಂದು ದಾಸ್ ವಾದಿಸಿದ್ದರು.

ಸರ್ಕಾರ ತ್ವರಿತವಾಗಿ ಗವರ್ನರ್ ನೇಮಕ ಮಾಡಿದ್ದು ಒಳ್ಳೆಯ ಸಂಗತಿ. ವಿಳಂಬವಾಗಿದ್ದಲ್ಲಿ ಹಣಕಾಸು ವಹಿವಾಟು ನಡೆಸುವ ಮಾರುಕಟ್ಟೆಗಳ ಮೇಲೆ ಅಡ್ಡಪರಿಣಾಮ ಗೋಚರಿಸುತ್ತಿತ್ತು. ಆರ್​ಬಿಐನ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಶಕ್ತಿಕಾಂತ ದಾಸ್ ಕಾಪಾಡಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ.

| ಸಿ. ರಂಗರಾಜನ್, ಆರ್​ಬಿಐ ಮಾಜಿ ಗವರ್ನರ್