ಚಲಿಸುತ್ತಿದ್ದ ರೈಲಿನಲ್ಲೇ ಗುಜರಾತ್ ಬಿಜೆಪಿ ಮಾಜಿ ಶಾಸಕನಿಗೆ ಗುಂಡಿಕ್ಕಿ ಹತ್ಯೆ

ನವದೆಹಲಿ: ಗುಜರಾತ್​ನ ಬಿಜೆಪಿಯ ಮಾಜಿ ಶಾಸಕ ಜಯಂತಿ ಭಾನುಶಾಲಿ ಅವರನ್ನು ಮಂಗಳವಾರ ಮುಂಜಾನೆ ರೈಲಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಅಹ್ಮದಾಬಾದ್‌ನಿಂದ ಬುಝ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಅವರಿದ್ದ ಕೋಚ್‌ಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಬ್ದಾಸ್‌ ವಿಧಾನಸಭಾ ಕ್ಷೇತ್ರದಿಂದ 2007 ಮತ್ತು 2012ರಲ್ಲಿ ಶಾಸಕರಾಗಿದ್ದ ಭಾನುಶಾಲಿ ಅವರನ್ನು ಕತಾರಿಯಾ ಮತ್ತು ಸುರ್ಜಾಬಾರಿ ಸ್ಟೇಷನ್‌ಗೆ ಸಮೀಪಿಸುತ್ತಿದ್ದಂತೆ ದಾಳಿ ನಡೆಸಿರುವ ಅಪರಿಚಿತರು ಅವರ ಕಣ್ಣು ಮತ್ತು ಎದೆ ಭಾಗಕ್ಕೆ ಗುಂಡು ಹೊಡೆದಿದ್ದಾರೆ.

ಘಟನೆ ಬಳಿಕ ರೈಲನ್ನು ಅಹಮದಾಬಾದ್‌ನ ಕಾಲುಪುರ್ ರೈಲ್ವೆ ನಿಲ್ದಾಣಕ್ಕೆ ತರಲಾಗಿದ್ದು, ಅಲ್ಲಿ ಕೋಚ್‌ನ್ನು ಪ್ರತ್ಯೇಕಪಡಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಇನ್ನು ಕಳೆದ ವರ್ಷವಷ್ಟೇ ಭಾನುಶಾಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಳಿಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಆರೋಪವನ್ನು ಭಾನುಶಾಲಿ ನಿರಾಕರಿಸಿದ್ದರು. (ಏಜೆನ್ಸೀಸ್)