ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ನವದೆಹಲಿ: ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗದ್ದುಗೆಗೆ ಏರಿದ್ದು ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಹೀನಾಯವಾಗಿ ಸೋಲು ಕಂಡಿವೆ. ಅದರಲ್ಲಿ ಆರ್​ಜೆಡಿ ಕೂಡ ಒಂದು.

ಆರ್​ಜೆಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲದೆ ತೀರ ಹೀನಾಯವಾಗಿ ಸೋಲನುಭವಿಸಿದೆ. ಇದೇ ಕಾರಣಕ್ಕೆ ಆರ್​ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ, ಸದ್ಯ ಜೈಲಿನಲ್ಲಿರುವ ಲಾಲು ಪ್ರಸಾದ್​ ಯಾದವ್​ ತೀವ್ರ ಖಿನ್ನತೆಗೆ ಜಾರಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿರುವ ಲಾಲು ಪ್ರಸಾದ್​ ಯಾದವ್ ಯಾರ ಬಳಿಯೂ ಮಾತಾಡುತ್ತಿಲ್ಲ. ಊಟವನ್ನೂ ಮಾಡುತ್ತಿಲ್ಲ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಅವರ ದೈನಂದಿನ ಚಟುವಟಿಕೆಗಳಲ್ಲಿ ತುಂಬ ಬದಲಾವಣೆಯಾಗಿದೆ. ಬೆಳಗ್ಗೆ ತಿಂಡಿ, ಸಂಜೆ ಊಟ ಮಾಡುತ್ತಾರೆ. ಆದರೆ ಮಧ್ಯಾಹ್ನದ ಊಟ ಮುಟ್ಟುತ್ತಿಲ್ಲ ಎಂದು ಲಾಲು ಪ್ರಸಾದ್​ಗೆ ಚಿಕಿತ್ಸೆ ನೀಡುತ್ತಿರುವ ರಾಜೇಂದ್ರ ಇನ್​ಸ್ಟಿಟ್ಯೂಟ್​ ಮೆಡಿಕಲ್​ ಸೈನ್ಸ್​ನ ವೈದ್ಯ ಉಮೇಶ್​ ಪ್ರಸಾದ್​ ತಿಳಿಸಿದ್ದಾರೆ.

ಬೆಳಗ್ಗೆ ತಿಂಡಿ, ಸಂಜೆ ಊಟವನ್ನೂ ಸರಿಯಾದ ಸಮಯಕ್ಕೆ ಮಾಡುತ್ತಿಲ್ಲ. ಹೀಗಾಗಿ ಮೊದಲಿನ ಪ್ರಮಾಣದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ದಿನದಲ್ಲಿ ಬಹುತೇಕ ಸಮಯ ಸುಮ್ಮನೆ ಇರುತ್ತಾರೆ ಎಂದು ವೈದ್ಯರು ಮಾಹಿತಿ ನಿಡಿದ್ದಾರೆ.