ಹಗರಿಬೊಮ್ಮನಹಳ್ಳಿ: ಮೂರು ವರ್ಷಗಳ ಬಳಿಕ ನಡೆದ ಪುರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಫಾರ್ಮ್-3 ವಿತರಣೆ ಕುರಿತು ದೀರ್ಘ ಚರ್ಚೆ ನಡೆಯಿತು.
ಅಧ್ಯಕ್ಷ ಮರಿರಾಮಪ್ಪ ಮಾತನಾಡಿ, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಅವರ ಕೆಲಸ ಮಾಡಿಕೊಡಬೇಕು. ಅನಗತ್ಯವಾಗಿ ಜನರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ತಿಳಿಸಿದರು.
ಜೋಗಿ ಹನುಮಂತು ಮಾತನಾಡಿ, ಫಾರ್ಮ್-3 ವಿತರಣೆಯಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಮೊದಲು ಅಧಿಕೃತ ಎಂದು ಹೇಳಿ ಈಗ ಅನಧಿಕೃತ ನಿವೇಶನಗಳಿವೆ ಎಂದು ವಿಳಂಬ ಮಾಡುತ್ತಿದ್ದು, ಜನರಿಂದ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ ಎಂದರು. ಇದಕ್ಕೆ ದನಿಗೂಡಿಸಿದ ಜನ್ನು ನಾಗರಾಜ್, ತುಂಗಭದ್ರಾ ಮುಳುಗಡೆ ಪ್ರದೇಶದಿಂದ ಹಲವು ಜನ ವಲಸೆ ಬಂದು ನೆಲೆಸಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಈವರೆಗೆ ತೆರಿಗೆ ಕಟ್ಟಿಸಿಕೊಳ್ಳಲಾಗಿದೆ. ಆದರೆ, ನಿವೇಶನಗಳನ್ನು ಅಭಿವೃದ್ಧಿಪಡಿಸಿಲ್ಲ. ಪುರಸಭೆಯಾದ ಬಳಿಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಅದು ಬಿಟ್ಟು ಫಾರ್ಮ್ ನಂ-3 ಕೊಡದೆ ಸತಾಯಿಸುವುದು ಸರಿಯಲ್ಲ ಎಂದರು. ಇದೇ ವಿಚಾರಕ್ಕೆ ಸದಸ್ಯರಾದ ಬಿ.ಗಂಗಾಧರ, ರಾಜೇಶ್ ಬ್ಯಾಡ್ಗಿ, ಗಣೇಶ ಲಮಾಣಿ, ಅಜೀಜುಲ್ಲಾ, ನೆಲ್ಲು ಇಸ್ಮಾಯಿಲ್, ಮಂಗಳಾ ಗೌಡ, ಎಚ್.ಎಂ.ಚನ್ನಮ್ಮ, ರೇಷ್ಮಾ, ಕಮಲಮ್ಮ, ಸುರೇಶ್ ಬಣಕಾರ್, ನವೀನ್ ಹಾಗೂ ನಾಮನಿರ್ದೇಶಿತ ಸದಸ್ಯರು ಸಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೂಡ್ಲಿಗಿ ವೃತ್ತದ ಬಳಿ ಮಹಿಳಾ ಶೌಚಗೃಹ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ರಾಮಪ್ಪ ಆದೇಶಿಸಿದರು. ನಾಮನಿರ್ದೇಶಿತ ಸದಸ್ಯ ಬಾಳಪ್ಪ ಮಾತನಾಡಿ, ಪಟ್ಟಣದ ಹಳೇ ಊರಿನಲ್ಲಿ ಸಾರ್ವಜನಿಕ ಸ್ಮಶಾನದ ಸಮಸ್ಯೆ ಇದೆ ಎಂದರು. ಪರಿಶೀಲಿಸುವುದಾಗಿ ಅಧ್ಯಕ್ಷ ರಾಮಪ್ಪ ತಿಳಿಸಿದರು. ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಅಧಿಕಾರಿಗಳಾದ ಪ್ರಭಾಕರ, ಮಾರೆಣ್ಣ, ಚಂದ್ರಶೇಖರ್ ಇತರರಿದ್ದರು.