ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆಗೆ ಒತ್ತಾಯ

ಚಿಕ್ಕಮಗಳೂರು: ಅರಣ್ಯ ಹಕ್ಕುಕಾಯ್ದೆ 2006ನ್ನು ಸಮರ್ಥವಾಗಿ ಜಾರಿ ಮಾಡದಿರುವ ರಾಜ್ಯ ಮುಖ್ಯಕಾರ್ಯದರ್ಶಿ ಕ್ರಮದಿಂದ ಸುಪ್ರೀಂಕೋರ್ಟ್ ಅರಣ್ಯವಾಸಿಗಳ ಮೇಲೆ ಮರಣ ಶಾಸನ ಬರೆದಿದೆ ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎನ್.ವಿಠ್ಠಲ್ ದೂರಿದರು.

ಶತಮಾನಗಳಿಂದ ಅರಣ್ಯದಲ್ಲಿ ವಾಸಿಸುತ್ತಿದ್ದರೂ ಭೂಮಿ ಹಕ್ಕು ಸಿಗದೆ ಅತಂತ್ರವಾಗಿರುವ ಅರಣ್ಯದ ಬುಡುಕಟ್ಟು ಮತ್ತು ಇತರೆ ಸಮುದಾಯದವರ ಹಿತಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅರಣ್ಯಹಕ್ಕು ಯೋಜನೆ ಬಗ್ಗೆ ಸರಿಯಾದ ಮಾಹಿತಿ ಕಾಡಿನ ಜನರಿಗೆ ನೀಡದಿರುವುದು ಹಾಗೂ ಅಧಿಕಾರಿಗಳ ಸರಿಯಾದ ಪ್ರಕ್ರಿಯೆ ಅನುಸರಿಸದಿರುವುದು ಸಮಸ್ಯೆಗೆ ಕಾರಣ. ಗ್ರಾಮ ಅರಣ್ಯ ಹಕ್ಕು ಸಮಿತಿ ಮಾತ್ರ ಅರ್ಜಿಗಳನ್ನು ತಿರಸ್ಕರಿಸುವ ಅಥವಾ ಪುರಸ್ಕರಿಸುವ ಹಕ್ಕು ಹೊಂದಿದೆ. ಒಂದು ವೇಳೆ ಸರಿಯಾದ ದಾಖಲೆ ಇಲ್ಲದೆ ಅರ್ಜಿಗಳನ್ನು ಕಳುಹಿಸಿದ್ದರೆ ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ವಿವರ ಕೇಳಿ ಗ್ರಾಮ ಅರಣ್ಯ ಸಮಿತಿಗೆ ವಾಪಸ್ ಕಳುಹಿಸಬೇಕು. ಆದರೆ, ಮೇಲ್ಮಟ್ಟದ ಎರಡೂ ಸಮಿತಿಗಳು ಅರ್ಜಿಗಳನ್ನು ವಾಪಸ್ ಕಳುಹಿಸದೆ ಮತ್ತು ಹಿಂಬರಹವನ್ನೂ ನೀಡದೆ ರಾಜ್ಯದಲ್ಲಿ ಲಕ್ಷಾಂತರ ಅರ್ಜಿಗಳ ಹಕ್ಕು ನೀರಾಕರಿಸಲಾಗಿದೆ ಎಂದು ಆರೋಪಿಸಿದರು.

ಯಾವುದೇ ತಿರಸ್ಕೃತ ಅರ್ಜಿದಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿಲ್ಲ. ಆತನ ಬಳಿ ಇರುವ ದಾಖಲೆಗಳನ್ನು ಸಮರ್ಥಿಸಲು ಅವಕಾಶ ನೀಡಿಲ್ಲ. ಗ್ರಾಮ ಸಮಿತಿ ಅನುಮೋದಿಸಿದ ಅರ್ಜಿಗಳನ್ನು ಏಕೆ ಮೇಲ್ಮಟ್ಟದ ಎರಡೂ ಸಮಿತಿಗಳು ತಿರಸ್ಕಾರ ಮಾಡಿವೆ ಎಂಬುದರ ಬಗ್ಗೆ ಅರ್ಜಿದಾರನಿಗೆ ಮಾಹಿತಿ ನೀಡಿಲ್ಲ ಎಂದರು.

ಅರಣ್ಯ ಸಮಿತಿ ಸಭೆಯೇ ನಡೆದಿಲ್ಲ: ಬಹುತೇಕ ಗ್ರಾಮಗಳಲ್ಲಿ ಗ್ರಾಮ ಅರಣ್ಯ ಸಮಿತಿ ಸಭೆಗಳೇ ನಡೆದಿಲ್ಲ. ಅಧಿಕಾರಿಗಳು ತಮಗೆ ಬೇಕಾದ ರೀತಿ ಸಭೆ ನಡಾವಳಿ ಬರೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಆದಿವಾಸಿ ಆಂದೋಲನ ಸದಸ್ಯೆ ಎಚ್.ಎನ್.ಜ್ಯೋತಿ ಹೇಳಿದರು. ಗ್ರಾಮ ಸಭೆಯಲ್ಲಿ ಫಲಾನುಭವಿಯೂ ಇದ್ದರೆ ತನ್ನ ಹಕ್ಕು ಮಂಡಿಸುತ್ತಾನೆ. ಅನಕ್ಷರಾದ ಅರಣ್ಯವಾಸಿಗಳಿಗೆ ಈ ಪ್ರಕ್ರಿಯೆ ಗೊತ್ತಿಲ್ಲದೆ ಲಕ್ಷಾಂತರ ಫಲಾನುಭವಿಗಳು ಈಗ ಒಕ್ಕಲೆಬ್ಬಿಸುವ ಆತಂಕ ಎದುರಿಸುತ್ತಿದ್ದಾರೆ. ಕೆಲವರಿಗೆ ಮಾತ್ರ ಭೂಮಿ ಹಕ್ಕು ನೀಡಿದ್ದರೂ ಸರಿಯಾದ ರೀತಿ ಭೂಮಿ ನೀಡಿಲ್ಲ ಎಂದರು. ಕೇಂದ್ರ ಸರ್ಕಾರ ಆದಿವಾಸಿ ಮತ್ತು ಅರಣ್ಯವಾಸಿಗಳಿಗೆ ನ್ಯಾಯ ದೊರಕಿಸುವ ಕಾನೂನನ್ನು ಜಾರಿಗೊಳಿಸಬೇಕು. ತಿರಸ್ಕೃತ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.