ಸಸಿ ನೆಟ್ಟು ಬೆಳೆಸುವ ವಿದ್ಯಾರ್ಥಿಗೆ 10 ಅಂಕ

ಕಲಬುರಗಿ: 8, 9 ಹಾಗೂ 10ನೇ ತರಗತಿ ಅವಧಿಯಲ್ಲಿ ಸಸಿ ನೆಟ್ಟು ಪೋಷಿಸುವ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 10 ಅಂಕ ನೀಡಲಾಗುವುದು ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಆರ್.ಶಂಕರ್ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವೃತ್ತ ಮಟ್ಟದ ಕೃಷಿ-ಅರಣ್ಯ ಕಾರ್ಯಾಗಾರ ಉದ್ಘಾಟಿಸಿದ ಅವರು, 10 ಹೆಚ್ಚುವರಿ ಅಂಕ ಸಿಗುವುದರಿಂದ ವಿದ್ಯಾರ್ಥಿಗಳು ಹೆಚ್ಚೆಚ್ಚು ಸಸಿ ನೆಟ್ಟು ಪೋಷಿಸುತ್ತಾರೆ. ಪೋಷಕರು ಸಹ ಮಕ್ಕಳನ್ನು ಬೆಂಬಲಿಸುತ್ತಾರೆ. ಒಂದು ಎಕರೆ ಜಮೀನಿನಲ್ಲಿ ಹೊಲದ ಸುತ್ತ ಬದುವಿನಲ್ಲಿ 20 ಮರ ಬೆಳೆಸುವುದು ಕಡ್ಡಾಯ ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಸಮರ್ಥಿಸಿಕೊಂಡ  ಸಚಿವರು, ಇದು ಪರಿಸರ ರಕ್ಷಣೆಗೆ ಉತ್ತಮ ಯೋಜನೆ ಎಂದರು.
ಶ್ರೀಗಂಧ ಮರ ಬೆಳೆ ವಿಮಾ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಶ್ರೀಗಂಧ ಮರ ಬೆಳೆಯುವ ರೈತರಿಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದ ಅವರು, ರೈತರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು. ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಬೇಕು. ಆಯಾ ಪ್ರದೇಶಕ್ಕೆ ಅನುಗುಣ ಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಈಗಾಗಲೇ ಕೃಷಿ- ಅರಣ್ಯ ಕುರಿತ ಮೂರು ಕಾರ್ಯಾಗಾರ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ 4ನೇ ಕಾರ್ಯಗಾರ ಚಿಂಚೋಳಿಯಲ್ಲಿ ಆಯೋಜಿಸಲಾಗುವುದು. ಈ ಕಾರ್ಯಾಗಾರದಲ್ಲಿ ರೈತರು, ಪರಿಸರ ಪ್ರೇಮಿಗಳು ಪಾಲ್ಗೊಳ್ಳುವುದು ಅಗತ್ಯ ಎಂದರು.
ಪ್ರಗತಿಪರ ರೈತರಾದ ಭಾನುದಾಸ ಪಾಟೀಲ್, ರಮೇಶ ಬಳಬಟ್ಟಿ, ಎಂ.ಬಿ.ಅಂಬಲಗಿ, ಐಸಿಎಆರ್ ಸದಸ್ಯ ಸೂರಜ್ಸಿಂಗ್ ಅವರು ಕೃಷಿ ಅರಣ್ಯ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಉಮೇಶ ಜಾಧವ್, ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವ್ಹಾಣ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಅನಿತಾ ಅರೇಕಲ್,ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪಿ. ಸಾಪಣ್ಣ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅಭಿವೃದ್ಧಿ) ಅಜಯ ಮಿಶ್ರಾ, ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ, ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಚ್.ಚವ್ಹಾಣ ಉಪಸ್ಥಿತರಿದ್ದರು.

ಅರಣ್ಯ ಇಲಾಖೆ ಖಾಲಿ ಹುದ್ದೆ ಭರ್ತಿ ಶೀಘ್ರ: ಕಲಬುರಗಿ: ಗಡಿಯಲ್ಲಿ ಸೇರಿ ಅರಣ್ಯ ಒತ್ತುವರಿಯಾಗಿದ್ದು ಕಂಡು ಬಂದರೆ ತೆರವಿಗೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯಬಿದ್ದರೆ ಜಂಟಿ ಸಮೀಕ್ಷೆಗೂ ನಾವು ಸಿದ್ಧ ಎಂದು ಅರಣ್ಯ ಮತ್ತು ಪರಿಸರ ಜೀವ ವಿಜ್ಞಾನ ಸಚಿವ ಆರ್.ಶಂಕರ್ ಹೇಳಿದರು.
ಒತ್ತುವರಿ ಯಾರೇ ಮಾಡಿದರೂ ಬಿಡಲ್ಲ. ತೆಲಂಗಾಣ ಗಡಿಯಲ್ಲಿ ಕೆಲ ಪ್ರದೇಶ ಒತ್ತುವರಿಯಾಗಿದ್ದು ಗಮನಕ್ಕೆ ಬಂದಿದೆ. ಅದು ಅಲ್ಲಿನವರ ಮನಸ್ಥಿತಿ. ನಾವು ಬಿಡುತ್ತೇವೆ ಎಂಬ ಭ್ರಮೆಯಲ್ಲಿರುವಂತಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ರಕ್ಷಕ, ಸಹಾಯಕರು ಸೇರಿ 800 ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ 1800 ಹುದ್ದೆ ಖಾಲಿ ಇವೆ ಎಂಬ ಮಾಹಿತಿಯಿದೆ. ಈ ನೇಮಕ ಬಳಿಕ ಮತ್ತಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಶೇ.2 ಅರಣ್ಯ ಹೆಚ್ಚಳ: ಅರಣ್ಯೀಕರಣ ಕಾರ್ಯದಡಿ ರಾಜ್ಯದಲ್ಲಿ ಶೇ.2 ಹಸಿರು ಪ್ರಮಾಣ ಹೆಚ್ಚಾಗಿದೆ. ದೇಶದಲ್ಲೇ ಇಷ್ಟು ಹೆಚ್ಚಳಗೊಂಡ ರಾಜ್ಯಗಳಲ್ಲಿ ಕರ್ನಾಟಕ  2ನೇ ಸ್ಥಾನದಲ್ಲಿದೆ ಎಂದ ಅವರು, ಹಸಿರು ಕರ್ನಾಟಕ ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿದರು.

ರಾಜೀನಾಮೆ ನೀಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ?
ನಾನು ರಾಜೀನಾಮೆ ನೀಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ? ಯಾರೂ ನನ್ನ ರಾಜೀನಾಮೆ ಕೇಳಿಲ್ಲ. ಖಾತೆ ಸಹ ಬದಲಾವಣೆ ಆಗಲ್ಲ. ಇದೆಲ್ಲ ಬರೀ ಸುಳ್ಳು. ನಿಮಗ್ಯಾರು ಹೇಳಿದ್ದಾರೆ ಎಂದು ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವ ಆರ್.ಶಂಕರ ಪ್ರಶ್ನಿಸಿದರು. ಇದೆಲ್ಲ ಮಾಧ್ಯಮಗಳ ಸೃಷ್ಟಿ, ತಮ್ಮ ಟಿಆರ್ಪಿಗಾಗಿ ಇಲ್ಲದ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಒಂದು ಹಂತದಲ್ಲಿ ನನ್ನ ತಾಳ್ಮೆ ಸಹ ಪರೀಕ್ಷೆ ಮಾಡಿದಂತಾಗುತ್ತಿದೆ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ನಾನು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದೇನೆ. ಐದು ವರ್ಷ ಸಮ್ಮಿಶ್ರ ಸರ್ಕಾರದ ಜತೆಗಿರುತ್ತೇನೆ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.