ಹಲ್ಲೆ ನಡೆಸಿದ ಅರಣ್ಯಾಧಿಕಾರಿ ಅಮಾನತು

ಕಳಸ: ಅರಣ್ಯ ರಕ್ಷಕನ ಮೇಲೆ ಹಲ್ಲೆ ನಡೆಸಿದ ಕಳಸ ಉಪ ವಲಯ ಅರಣ್ಯಾಧಿಕಾರಿ ವೀರಭದ್ರ ಅವರನ್ನು ಮುಖ್ಯಅರಣ್ಯಾಧಿಕಾರಿ ಅಮಾನತು ಮಾಡಿದ್ದಾರೆ.

ಫೆ.13ರಂದು ಕಳಸ ಸಮೀಪದ ಬಾಳೆಹೊಳೆ ಬೀಟ್​ನ ಅರಣ್ಯ ರಕ್ಷಕ ಕೀರ್ತನ್ ಎಂಬುವರ ಮೇಲೆ ಉಪ ವಲಯ ಅರಣ್ಯಾಧಿಕಾರಿ ವೀರಭದ್ರ ನಾಯ್ಕ ಅವರು ಜಮೀನಿನ ಪಂಚನಾಮೆ ಸಂಬಂಧ ನಕಲಿ ದಾಖಲೆಗಳ ಕಡತಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದ್ದರು. ಕಡತದಲ್ಲಿರುವ ದಾಖಲೆ ಪರಿಶೀಲಿಸದೆ ಸಹಿ ಮಾಡುವುದಿಲ್ಲ ಎಂದು ಕೀರ್ತನ್ ಪಟ್ಟು ಹಿಡಿದ್ದರಿಂದ ಕುಪಿತಗೊಂಡ ವೀರಭದ್ರ ಕಚೇರಿಯಲ್ಲಿ ಅರಣ್ಯ ರಕ್ಷಕ ಕೀರ್ತನ್ ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ನಡೆಸಿ ನಿಂದಿಸಿದ್ದರು. ಈ ಘಟನೆ ವಿಡಿಯೋ ಜಿಲ್ಲಾದ್ಯಂತ ವೈರಲ್ ಆಗಿತ್ತು.

ಅರಣ್ಯ ರಕ್ಷಕ ಕೀರ್ತನ್ ತಮ್ಮ ಮೇಲಾಧಿಕಾರಿಗಳಿಗೆ ವೀರಭದ್ರ ಅವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಕುರಿತು ಕೊಪ್ಪ ಡಿಎಫ್​ಒ ವರದಿ ನೀಡುವಂತೆ ಕಳಸ ಆರ್​ಎಫ್​ಒ ರವಿಕುಮಾರ್ ಅವರಿಗೆ ಆದೇಶಿಸಿದ್ದರು. ಅರಣ್ಯಾಧಿಕಾರಿ ವೀರಭದ್ರ ಅವರ ಕರ್ತವ್ಯಲೋಪ, ಅನುಚಿತ ವರ್ತನೆ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.