ಚಿಕ್ಕಮಗಳೂರಿನಿಂದ ಗಡಿ ಸರ್ವೆ ಆರಂಭ

ಚಿಕ್ಕಮಗಳೂರು: ಅರಣ್ಯ ಹಾಗೂ ಕಂದಾಯ ಭೂಮಿಯ ಗಡಿಯನ್ನು ಕರಾರುವಕ್ಕಾಗಿ ಗುರುತಿಸಲು ಜಂಟಿ ಸರ್ವೆ ಕೈಗೊಳ್ಳಲಿದ್ದು, ಚಿಕ್ಕಮಗಳೂರು ಜಿಲ್ಲೆಯನ್ನೇ ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಬುಧವಾರ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅರಣ್ಯ, ಕಂದಾಯ ಭೂಮಿ ನಡುವಿನ ಎಲ್ಲೆ ಸ್ಪಷ್ಟತೆ ಇಲ್ಲದಿರುವುದು ಆಡಳಿತದ ಪ್ರಗತಿಗೆ ಹಿನ್ನಡೆಯಾಗಿದೆ. ಒತ್ತುವರಿ ತೆರವು, 94ಸಿ ಹಕ್ಕುಪತ್ರ, ಸರ್ಕಾರಿ ಯೋಜನೆಗಳ ಅನುಷ್ಠಾನ ಸೇರಿ ಹಲವು ರೀತಿಯಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ಇತಿಶ್ರೀ ಹಾಡಿದರೆ ಮಾತ್ರ ಅರಣ್ಯ ಇಲಾಖೆ ಮತ್ತು ಜನರ ನಡುವೆ ಇರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.

ಹಲವು ವರ್ಷಗಳಿಂದ ಜಂಟಿ ಸರ್ವೆ ಮಾಡಬೇಕೆಂಬ ಬೇಡಿಕೆ ಈಡೇರಿಸಲು ನಾನಾ ಕಾರಣಗಳಿಂದ ಆಗಿರಲಿಲ್ಲ. ಆದರೆ ನಾನು ಮಾತು ಕೊಟ್ಟಂತೆ ನಡೆದುಕೊಳ್ಳುವ ಜಾಯಮಾನದವನು. ಎಂಥದೇ ಸಮಸ್ಯೆ ಎದುರಾದರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಂಟಿ ಸರ್ವೆ ಮಾಡುವ ಮೂಲಕ ಭೂ ವಿವಾದಗಳಿಗೆ ಇತಿಶ್ರೀ ಹಾಡಿ ಇತರ ಜಿಲ್ಲೆಗಳಿಗೂ ಇದು ಮಾದರಿಯಾಗುವಂತೆ ಕೆಲಸ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಯಮ ಪಾಲನೆಗೆ ಕಠಿಣ ಧೋರಣೆ: ಮುಂದಿನ ಪೀಳಿಗೆಗೆ ಅರಣ್ಯ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸದ್ಯ ಶೇ.22ರಷ್ಟು ಅರಣ್ಯ ಭೂಮಿ ಇದ್ದು, ಇದನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಬೇಕಾದರೆ ನಿಗದಿತ ನಿಯಮ ಪಾಲಿಸಲೇಬೇಕು. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅಷ್ಟೊಂದು ಕಠಿಣವಾದ ಧೋರಣೆ ತಾಳುತ್ತಾರೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಹೇಳಿದರು. ಯಾವುದೆ ಯೋಜನೆಗೆ ಭೂಮಿ ಬೇಕಾದರೆ ಸಂಬಂಧಿಸಿದ ಇಲಾಖಾಧಿಕಾರಿಗಳು ಆನ್​ಲೈನ್​ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಯೋಜನೆಗೆ ಒಂದು ಹೆಕ್ಟೇರ್​ವರೆಗೆ ಭೂಮಿ ನೀಡುವ ಅಧಿಕಾರ ರಾಜ್ಯ ಮಟ್ಟದಲ್ಲಿದೆ ಎಂದರು.