1106 ಹೆಕ್ಟೇರ್‌ನಲ್ಲಿ ಗಿಡ ಬೆಳೆಸಲು ಸಿದ್ಧತೆ

ಗೋಪಾಲಕೃಷ್ಣ ಪಾದೂರು ಉಡುಪಿ
ಈ ಬಾರಿಯ ಮಳೆಗಾಲದಲ್ಲಿ ಜಿಲ್ಲೆಯ 1106 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡುವುದಕ್ಕೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಜಲವರ್ಷ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 500 ಗಿಡಗಳನ್ನು ಬೆಳೆಸಲು ಸೂಚನೆ ನೀಡಿದೆ.

ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಅರಣ್ಯ ಇಲಾಖೆ, ಜಿ.ಪಂ. ಸಾಮಾಜಿಕ ಅರಣ್ಯ ವಿಭಾಗ ಸಹಯೋಗದಲ್ಲಿ ಜಲವರ್ಷ ಆಚರಣೆ ನಡೆಯುತ್ತಿದ್ದು, ಕೆರೆ ಹೂಳೆತ್ತುವಿಕೆ ಮತ್ತು ಗಿಡಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ, ಸಣ್ಣ ನೀರಾವರಿ, ಅರಣ್ಯ ಇಲಾಖೆ, 14ನೇ ಹಣಕಾಸು ಯೋಜನೆ ಅನುದಾನಗಳನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದೆ. ಜಿಲ್ಲೆಯ 158 ಗ್ರಾಪಂಗಳಲ್ಲಿ ತಲಾ 500 ಗಿಡಗಳಂತೆ ಕನಿಷ್ಠ 79 ಸಾವಿರ ಗಿಡಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ.

ಸಾಮಾಜಿಕ ಅರಣ್ಯ ವಿಭಾಗದಿಂದ 1.69 ಲಕ್ಷ ಗಿಡ: ಜಿಪಂ ಸಾಮಾಜಿಕ ಅರಣ್ಯ ವಿಭಾಗದಲ್ಲಿ 1.69 ಲಕ್ಷ ಗಿಡಗಳನ್ನು ಬೆಳೆಸಲಾಗಿದ್ದು, ಗ್ರಾಪಂಗಳಿಗೆ ಇದನ್ನು ವಿತರಿಸಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಲ್ಲಿ 71,500 ವಿವಿಧ ಜಾತಿಯ ಗಿಡಗಳು ಹಾಗೂ 1500 ಶ್ರೀಗಂಧ ಸಹಿತ 79 ಸಾವಿರ ಗಿಡಗಳು ವಿತರಣೆಯಾಗಲಿವೆ. 23 ಕಿ.ಮೀ. ರಸ್ತೆ ಬದಿ ನೆಡುತೋಪು ನಿರ್ಮಿಸಲಾಗುತ್ತದೆ. ಇದಕ್ಕಾಗಿ ನೆಡಲು 22,500 ಸಸಿಗಳನ್ನು ತಯಾರಿಸಲಾಗಿದೆ.

13 ಲಕ್ಷ ಸಸಿಗಳು: ಕುಂದಾಪುರ ಅರಣ್ಯ ವಿಭಾಗದಲ್ಲಿ 2019-20ನೇ ಸಾಲಿಗೆ ವಿವಿಧ ಯೋಜನೆಗಳಡಿ 8 ಅರಣ್ಯ ವಲಯಗಳಲ್ಲಿ ಒಟ್ಟು 1106 ಹೆಕ್ಟೇರ್ ಪ್ರದೇಶದಲ್ಲಿ(ಬ್ಲಾಕ್ ನೆಡುತೋಪು) ನಾಟಿ ಮಾಡಲು 10.45 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.ಇದಲ್ಲದೇ 25 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕೆ ತಯಾರಿ ನಡೆದಿದ್ದು, ಇದಕ್ಕಾಗಿ ಪ್ರತ್ಯೇಕ 7,500 ಗಿಡ, ಸಾರ್ವಜನಿಕರು ಮತ್ತು ರೈತರಿಗೆ ವಿತರಣೆಗಾಗಿ 2.5ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಕುಂದಾಪುರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 13,22,500 ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪುಗೊಂಡಿದೆ.

ಸಸ್ಯಕ್ಷೇತ್ರಗಳಲ್ಲಿ ಯಾವೆಲ್ಲ ಸಸಿಗಳಿವೆ?: ಎಂಟು ಸಸ್ಯಕ್ಷೇತ್ರಗಳಲ್ಲಿ ಹಲಸು, ಮಾವು, ಬಿದಿರು, ದಾಲ್ಚಿನಿ, ನೇರಳೆ, ಬೆತ್ತ, ಸಾಗುವಾನಿ, ರಕ್ತಚಂದನ, ಮಹಾಗನಿ, ದಾಲ್ಚಿನಿ, ಬಾದಾಮಿ, ಕಿರಾಲುಬೋಗಿ, ರಾಂಪತ್ರೆ, ಹೆಬ್ಬೇವು, ಅಂಟುವಾಳ, ಹೊಂಗೆ, ನಾಗಲಿಂಗ ಪುಷ್ಪ, ಹೊಳೆ ದಾಸವಾಳ, ಕಕ್ಕೆ, ಬೀಟೆ, ಅಶೋಕ, ಬಿಲ್ವಪತ್ರೆ, ನೆಲ್ಲಿ, ಪುನರ್ ಪುಳಿ, ಮುತ್ತುಗ, ಶ್ರೀಗಂಧ, ಸಂಪಿಗೆ, ಮುರಿಯ, ರೆಂಜ, ದಾಳಿಂಬೆ, ಕಹಿಬೇವು, ದೂಪ, ಬೇಂಗ, ಹೆಬ್ಬಲಸು, ವಾಟೆಹುಳಿ ಇತ್ಯಾದಿ ಗಿಡಗಳನ್ನು ಬೆಳೆಸಲಾಗಿದೆ.
ಸಸಿಗಳ ಲಭ್ಯತೆ

 • ಅರಣ್ಯ ವಲಯ ಸಸ್ಯಕ್ಷೇತ್ರ ಗಿಡಗಳು
  ಬೈಂದೂರು ಸರ್ಪನಕಟ್ಟೆ 3,44,200
  ಕುಂದಾಪುರ ನೇರಳಕಟ್ಟೆ ಮಾವಿನಗುಳಿ 3,77,900
  ಶಂಕರನಾರಾಯಣ ಮೆಟ್ಕಲ್‌ಗುಡ್ಡ 96,775
  ಬ್ರಹ್ಮಾವರ ಬೈಕಾಡಿ 49,400
  ಹೆಬ್ರಿ ಮಡಾಮಕ್ಕಿ 61,000
  ಕಾರ್ಕಳ ಶಿರ್ಲಾಲು 2,35,000
  ಮೂಡುಬಿದಿರೆ ನಾರಾವಿ ಕುತ್ಲೂರು 59,800
  ವೇಣೂರು ಅಳದಂಗಡಿ 99,500

Leave a Reply

Your email address will not be published. Required fields are marked *