ಅಕ್ರಮ ಚಟುವಟಿಕೆ ತಾಣವಾದ ಕೈಗಾರಿಕಾ ವಸಾಹತು ಪ್ರದೇಶ

ಎನ್.ಆರ್.ಪುರ: ತಾಲೂಕಿನ ಲಿಂಗಾಪುರ ಹಾಗೂ ಹಿಳುವಳ್ಳಿ ಗ್ರಾಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದಿಂದ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಕೈಗಾರಿಕಾ ವಸಾಹತು ಪ್ರದೇಶ ಹಾಳುಬಿದ್ದಿದೆ. ಇದರಿಂದ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಗ್ರಾಮೀಣ ಭಾಗದ ಅದರಲ್ಲೂ ಸ್ಥಳೀಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭಾ ಪಲಾಯನ ತಡೆಗಟ್ಟುವ ಉದ್ದೇಶದಿಂದ ಸುಮಾರು 10 ಎಕರೆ ಜಾಗದಲ್ಲಿ ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಕೈಗಾರಿಕೆಗಳನ್ನು ನಿರ್ವಿುಸಲು ಕೈಗಾರಿಕಾ ವಸಾಹತು ಪ್ರದೇಶಕ್ಕೆ ವಿದ್ಯುತ್, ರಸ್ತೆ, ನೀರು ಇನ್ನಿತರ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳು ಮೀನಮೇಷ ಎಣಿಸಿದ್ದರಿಂದ ಕೈಗಾರಿಕಾ ಪ್ರದೇಶದಲ್ಲಿ ಕಾಡು ಬೆಳೆದಿದೆ. ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮದ್ಯಪಾನ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

ಕೈಗಾರಿಕಾ ವಸಾಹತು ಪ್ರದೇಶ ನಿರ್ವಣಗೊಂಡು 6 ವರ್ಷ ಕಳೆದಿದ್ದರೂ ಅಧಿಕೃತ ಉದ್ಘಾಟನೆ ಕಂಡಿಲ್ಲ. ಇಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು ದುಸ್ಥಿತಿಗೆ ತಲುಪಿವೆ. ವಿದ್ಯುತ್ ಟಿಸಿಗಳು ಹಾಳಾಗಿ ತುಕ್ಕು ಹಿಡಿಯುತ್ತಿವೆ. ಬೀದಿ ದೀಪದ ಬಲ್ಬ್​ಗಳನ್ನು ಪುಂಡರು ಒಡೆದು ಹಾಕಿದ್ದಾರೆ. ರಸ್ತೆಗಳೆಲ್ಲ ಮುಚ್ಚಿಹೋಗುವಷ್ಟು ಕಾಡು ಬೆಳೆದಿದೆ.

ಪ್ರಸ್ತುತ ರಬ್ಬರ್, ಅಡಕೆಯನ್ನು ಹೆಚ್ಚು ಬೆಳೆಯುತ್ತಿರುವುದರಿಂದ ಇದಕ್ಕೆ ಸಂಬಂಧಪಟ್ಟ ಕೈಗಾರಿಕೆ, ಸಿದ್ಧ ಉಡುಪು ತಯಾರಿಕಾ ಘಟಕ, ಕೆಮಿಕಲ್ಸ್ ಉತ್ಪಾದನೆ, ಗೃಹ ಕೈಗಾರಿಕೆ ವಸ್ತುಗಳ ತಯಾರಿಕಾ ಘಟಕ ಸ್ಥಾಪನೆ ಮುಂತಾದ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ವಿಪುಲ ಅವಕಾಶಗಳಿದ್ದರೂ ಯಾವುದೇ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಮನಸ್ಸು ಮಾಡಲಿಲ್ಲ. ಇದರಿಂದ ತಾಲೂಕಿನ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮಹತ್ತರ ಕಾರ್ಯ ಈಡೇರಿಲ್ಲ.

ಅರಣ್ಯ ಇಲಾಖೆಯಿಂದ ಅಡ್ಡಿ: ಕೈಗಾರಿಕಾ ವಸಾಹತು ಪ್ರದೇಶ ನಿರ್ವಣವಾಗುವವರೆಗೂ ಸುಮ್ಮನಿದ್ದ ಅರಣ್ಯ ಇಲಾಖೆ ನಂತರದ ದಿನಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿತು. 1930ರ ಹಿಂದಿನ ಮಹಾರಾಜರ ಕಾಲದ ಆದೇಶ ಮುಂದಿಟ್ಟುಕೊಂಡು ಕೈಗಾರಿಕಾ ವಸಾಹತು ಪ್ರದೇಶದ ಜಾಗ ಕಿರು ಅರಣ್ಯ ವ್ಯಾಪ್ತಿಗೆ ಸೇರಿದ್ದು ಎಂದು ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯುಂಟುಮಾಡಿತು. ಈ ಜಾಗದ ಬದಲಿಗೆ ಬೇರೆ ಕಡೆ 20 ಎಕರೆ ಜಾಗ ಕೊಡಬೇಕು ಎಂದು ಅರಣ್ಯ ಇಲಾಖೆ ಕೇಳುತ್ತಿದೆ. ಇದರಿಂದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕೈಗಾರಿಕೆ ನಿರ್ಮಾಣ ಮಾಡುವುದು ಸ್ಥಗಿತಗೊಂಡಿತು. ಕೈಗಾರಿಕೆ ಸ್ಥಾಪನೆಗೆಂದು ಬಂದಿದ್ದ ಬೆರಳೆಣಿಕೆಯ ಉದ್ಯಮಿಗಳೂ ಹಿಂದೆ ಸರಿಯುವಂತಾಯಿತು. ಕಾಪರ್ ಸಲ್ಪೇಟ್ ತಯಾರಿಕಾ ಘಟಕ, ಕಾಫಿಪುಡಿ ಪ್ಯಾಕಿಂಗ್ ಸ್ಥಾಪಿಸಲು ಉದ್ಯಮಿಗಳು ಹಣ ಕಟ್ಟಿದ್ದರು. ವರ್ಷಗಟ್ಟಲೇ ಆದರೂ ಸಮಸ್ಯೆ ಬಗೆಹರಿಸದಿದ್ದಾಗ ಆಗಿನ ಶಾಸಕ ಡಿ.ಎನ್.ಜೀವರಾಜ್ ಉದ್ಯಮಿಗಳಿಗೆ ನಿಗಮದಿಂದ ಅವರು ಹೂಡಿದ್ದ ಬಂಡವಾಳ ವಾಪಸ್ ಕೊಡಿಸಿದರು.