ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಮ್ಮತಿ

ಬಾಲಚಂದ್ರ ಕೋಟೆ ಬೆಳ್ಳಾರೆ

ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಡಾವು ಸಬ್‌ಸ್ಟೇಶನ್ ಕಾಮಗಾರಿಗೆ ಅರಣ್ಯ ಇಲಾಖೆಯ ತೊಡಕು ನಿವಾರಣೆಯಾಗಿದೆ. ಬೆಳ್ಳಾರೆ ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಮುತುವರ್ಜಿಯಲ್ಲಿ ಅರಣ್ಯ ಪ್ರದೇಶದಲ್ಲಿ ಲೈನ್ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ.
ಬೆಳ್ಳಾರೆ ವಿದ್ಯುತ್ ಬಳಕೆದಾರರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ವಿದ್ಯುತ್ ಲೈನಿಗೆ ತೊಂದರೆ ನೀಡದಂತೆ ಮನವಿ ಮಾಡಿದ್ದು, ತಕ್ಷಣವೇ ಇಲಾಖೆ ಸ್ಪಂದಿಸಿ ಸಾರ್ವಜನಿಕ ಹಿತಾಸಕ್ತಿ ಬೇಡಿಕೆ ಆಧಾರದಲ್ಲಿ ಮಹಜರು ನಡೆಸಿ ಯಾವುದೇ ಆಕ್ಷೇಪಣೆ ಇಲ್ಲವೆಂದು ತಿಳಿಸಿದೆ.

ಸಮಸ್ಯೆ ಬಗೆಹರಿಸುವ ಹಿನ್ನೆಲೆಯಲ್ಲಿ ಸಮಿತಿ ಪ್ರಯತ್ನ ಮುಂದುವರಿಸಿದೆ. ಮಾಡಾವಿನಲ್ಲಿ ನಿರ್ಮಾಣ ಹಂತದಲ್ಲಿರುವ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ವಿವಿಧ ಸಂಘಟನೆಗ ಸಹಯೋಗದೊಂದಿಗೆ ಕ್ರಿಯಾ ಸಮಿತಿ ರಚಿಸಲಾಗಿದೆ. ಬೆಳ್ಳಾರೆಯ ಜಯಪ್ರಸಾದ್ ಜೋಶಿ, ಸುರೇಶ್ಚಂದ್ರ ಕಲ್ಮಡ್ಕ, ರಮೇಶ್ ಕೋಟೆ, ರಾಮಚಂದ್ರ ದೇವಸ್ಯ ನೇತೃತ್ವದಲ್ಲಿ ಕಿಸಾನ್ ಸಂಘದ ಪ್ರಮುಖರು ನೇತೃತ್ವ ವಹಿಸಿದ್ದಾರೆ.
ಸಬ್‌ಸ್ಟೇಷನಿಗೆ ಕೆಲವು ಕಡೆಯಿಂದ ಬರುವ ವಿದ್ಯುತ್ ಲೈನಿನ ಮೇಲೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಖಾಸಗಿ ವ್ಯಕ್ತಿಗಳ ಮನವೊಲಿಸಿ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ಸಲಹೆ ಮಾಡಲಾಗಿದ್ದು, ಸ್ಪಂದನೆಯೂ ದೊರೆತಿದೆ. ಆಕ್ಷೇಪಣೆದಾರರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಬದ್ಧವಾದ ಸೂಕ್ತ ಪರಿಹಾರ ಮಾಡುವ ಸಲಹೆಯನ್ನು ನೀಡಲಾಗಿದೆ. ಗುತ್ತಿಗೆದಾರರ ನಿಧಾನಗತಿಯ ಹಾಗೂ ಪ್ರಗತಿಯಿಲ್ಲದ ಕೆಲಸ ಮನಗಂಡು ಅಧಿಕಾರಿಗಳ ಸಮಕ್ಷಮದಲ್ಲಿಯೇ ವಿಚಾರಿಸಿ ಎಚ್ಚರಿಕೆ ನೀಡಬೇಕಿದ್ದು, ಸ್ಪಂದಿಸದಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸಲು ವಿದ್ಯುತ್ ಬಳಕೆದಾರರು ಒತ್ತಾಯಿಸಿದ್ದಾರೆ.

ಕಾಮಗಾರಿ ಕುರಿತು ವಿಳಂಬ ಧೋರಣೆ ತೋರಿಸಿದರೆ ಮುಂದಿನ ದಿನಗಳಲ್ಲಿ ಇನ್ನೊಂದು ಸುತ್ತಿನ ಮನವಿ, ಹಕ್ಕೊತ್ತಾಯ, ಕಾರ್ಡ್ ಚಳುವಳಿ ಇತ್ಯಾದಿಗಳನ್ನು ನಡೆಸಲಾಗುವುದು. 110 ಕೆ.ವಿ ಸ್ಟೇಶನಿಂದ ವಿದ್ಯುತ್ ಪಡೆಯುವ ಎಲ್ಲಾ ಬಳಕೆದಾರರು, ಜನಪ್ರತಿನಿಧಿಗಳು, ಸಾರ್ವಜನಿಕರು ಪಕ್ಷಭೇದ ಮರೆತು ಕೈಜೋಡಿಸಿ ಮಾದರಿಯಾಗಬೇಕಿದೆ.
-ಜಯಪ್ರಸಾದ್ ಜೋಶಿ, ಅಧ್ಯಕ್ಷ ಬೆಳ್ಳಾರೆ ಬಳಕೆದಾರರ ವೇದಿಕೆ

ಮಾಡಾವು ಸಬ್‌ಸ್ಟೇಷನಿಗೆ ಬೇಕಾಗಿ ಮರಗಳನ್ನು ಕಡಿದು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಒಪ್ಪಿಗೆ ದೊರೆತಾಗಿದೆ. ಇನ್ನು ಮೆಸ್ಕಾಂ ಕಡೆಯಿಂದ ನಡೆಯಬೇಕಿರುವ ಕೆಲಸ ಶೀಘ್ರ ನಡೆಯಬೇಕಷ್ಟೆ.
ಸುಬ್ರಹ್ಮಣ್ಯ ರಾವ್, ವಲಯ ಅರಣ್ಯಾಧಿಕಾರಿ

ಮಾಡಾವು ಸಬ್‌ಸ್ಟೇಷನ್ ವಿಚಾರ ಕುರಿತು ಈಗಾಗಲೆ ವ್ಯಾಜ್ಯವು ಕೋರ್ಟಿನಲ್ಲಿದೆ. ಕಾಮಗಾರಿ ನಡೆಯುವ ಕಾಲಾವಧಿ ಮಧ್ಯೆ ಮತ್ತೆ ತಕರಾರು, ತಡೆಯೊಡ್ಡಿದರೆ ಕೋರ್ಟಿನ ತೀರ್ಮಾನಕ್ಕೆ ಬದ್ಧರಾಗಬೇಕಾಗುತ್ತದೆ. ಆಗಸ್ಟ್ ಒಳಗೆ ಕಾಮಗಾರಿ ಮುಗಿಸುವುದು ನಮ್ಮ ನಿರೀಕ್ಷೆಯಾಗಿತ್ತು.ಮುಂದಿನ ದಿನಗಳಲ್ಲಿ ಯಾವುದೆ ತಡೆ ತಕರಾರು ಬಾರದೆ ಇದ್ದರೆ ಶೀಘ್ರವಾಗಿ ಕಾಮಗಾರಿ ಮುಗಿಸಲಾಗುವುದು.
ರವಿ ಕಾಮತ್, ಸೀನಿಯರ್ ಇಂಜಿನಿಯರ್, ಕೆಪಿಟಿಸಿಎಲ್

Leave a Reply

Your email address will not be published. Required fields are marked *