ಸಿಎಂ ಪದಕ ಮರೀಚಿಕೆ

«ಅರಣ್ಯ ಇಲಾಖೆ ಹೊಸ ಯೋಜನೆಗೆ ಆರಂಭದಲ್ಲೇ ವಿಘ್ನ»

– ರಾಜೇಶ್ ಶೆಟ್ಟಿ ದೋಟ, ಮಂಗಳೂರು
ರಾಜ್ಯ ಸರ್ಕಾರ ಉತ್ತಮ ಸೇವೆ ಸಲ್ಲಿಸಿದ ಅರಣ್ಯ ಸಿಬ್ಬಂದಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’ ಘೋಷಣೆ ಮಾಡಿ ವರ್ಷ ಕಳೆದರೂ, ಪ್ರದಾನ ಮಾಡಲು ಇನ್ನೂ ದಿನ ಕೂಡಿಬಂದಿಲ್ಲ.
ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದ ಅಧಿಕಾರಿ, ಸಿಬ್ಬಂದಿಗೆ ನೀಡುವಂತೆ ಅರಣ್ಯ ಇಲಾಖೆಯಲ್ಲೂ ಸಾಧನೆ ಮಾಡಿದ ಸಿಬ್ಬಂದಿಗೆ ಪ್ರತೀ ವರ್ಷ ಪದಕ ನೀಡಬೇಕೆಂಬುದು ಇಲಾಖಾ ಸಿಬ್ಬಂದಿಯ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಲವಾರು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. 2017ರ ಸೆ.14ರಂದು ಅಂದಿನ ಪಿಸಿಸಿಎಫ್ ಸಿ.ಎಸ್.ಸುಗಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ, 2017ರ ಅ.4ರಂದು ಅನುಮೋದನೆ ನೀಡಿ, ಪುರಸ್ಕೃತರ ಪಟ್ಟಿ ರೂಪಿಸಲು ತಿಳಿಸಿತ್ತು. ಇದರನ್ವಯ ಇಲಾಖೆ ಸಿಬ್ಬಂದಿಯ ಸೇವಾ ವಿವರವನ್ನು ರಾಜ್ಯದ ಎಲ್ಲ ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು, ಇಲಾಖಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದು ಅಂತಿಮವಾಗಿ 25 ಮಂದಿಯನ್ನು ಆಯ್ಕೆ ಮಾಡಿ ಫೆ.23ರಂದು ಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದೆ. ಪ್ರಸ್ತುತ ಮುಂದಿನ ವರ್ಷದ ಪಟ್ಟಿ ಸಿದ್ಧಪಡಿಸಲು ಈಗಾಗಲೇ ಸುತ್ತೋಲೆ ಹೊರಡಿಸಬೇಕಿತ್ತು. ಆದರೆ, ಮೊದಲ ಸಾಲಿನ ಪ್ರಶಸ್ತಿ ವಿತರಣೆಯೇ ಇನ್ನೂ ನಡೆದಿಲ್ಲ.

ಯಾವ ವಿಭಾಗದಲ್ಲಿ ಪ್ರಶಸ್ತಿ?: ಅರಣ್ಯ ರಕ್ಷಣೆ, ಅಭಿವೃದ್ಧಿ, ವನ್ಯಜೀವಿ ಸಂರಕ್ಷಣೆ, ಶೌರ್ಯ ಮತ್ತು ದಿಟ್ಟತನ, ಕಾರ್ಯಯೋಜನೆ, ಸಂಶೋಧನೆ, ತರಬೇತಿ ಈ ವಿಭಾಗಗಳಲ್ಲಿ ಅರಣ್ಯ ವೀಕ್ಷಕರು, ರಕ್ಷಕರು, ಉಪ ವಲಯ ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿ ಹಂತದ ಸಿಬ್ಬಂದಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಬಹುಕಾಲದ ಬೇಡಿಕೆ: ಬೇಟೆಗಾರರು, ಮರಗಳ್ಳರು, ಒತ್ತುವರಿ ತೆರವು ಸಂದರ್ಭ ಹಾಗೂ ವನ್ಯಪ್ರಾಣಿಗಳಿಂದಾಗುವ ಅಪಾಯವನ್ನು ಲೆಕ್ಕಿಸದೆ ಇಲಾಖಾ ಸಿಬ್ಬಂದಿ ಪ್ರಾಣದ ಹಂಗು ತೊರೆದು ಹಗಲಿರುಲು ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಅವರಲ್ಲಿ ಮನೋಸ್ಥೈರ್ಯ, ಕರ್ತವ್ಯ ನಿಷ್ಠೆ, ದಕ್ಷತೆ ತುಂಬುವ ನಿಟ್ಟಿನಲ್ಲಿ ಪುರಸ್ಕಾರ ನೀಡಲು ಪುರಸ್ಕಾರ ಯೋಜನೆ ಹಮ್ಮಿಕೊಳ್ಳಬೇಕೆಂದು ಇಲಾಖೆ ಸಿಬ್ಬಂದಿ ಆಗ್ರಹಿಸಿದ್ದರು. ಸರ್ಕಾರ ಇದಕ್ಕೆ ಹಸಿರು ನಿಶಾನೆ ತೋರಿದ್ದರೂ, ಯೋಜನೆ ಆರಂಭಿಕ ಹಂತದಲ್ಲಿಯೇ ಮುಗ್ಗರಿಸಿದೆ. ಸಂಘ, ಸಂಸ್ಥೆ ಹಾಗೂ ಟ್ರಸ್ಟ್‌ಗಳನ್ನು ಬಿಟ್ಟರೆ ಅರಣ್ಯ ಇಲಾಖಾ ಸಿಬ್ಬಂದಿಯನ್ನು ಸರ್ಕಾರದ ವತಿಯಿಂದ ಗುರುತಿಸಿ, ಗೌರವಿಸುವ ಬೇರಾವುದೇ ಕಾರ್ಯಕ್ರಮಗಳಿಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಮಹತ್ವ ಪಡೆದಿದೆ.

ಘೋಷಣೆಗಷ್ಟೇ ಸೀಮಿತ: ಆರಂಭದಲ್ಲಿ ಮಾ.31ರ ವಿಶ್ವ ಅರಣ್ಯ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಘೋಷಣೆ ಮಾಡಲಾಗಿತ್ತು. ಬಳಿಕ ಸೆ.11ರ ಅರಣ್ಯ ಹುತಾತ್ಮ ದಿನಾಚರಣೆಗೆ ಮುಂದೂಡಲಾಯಿತು. ಇತ್ತೀಚೆಗೆ ನಡೆದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲೂ ಪ್ರಶಸ್ತಿ ಪ್ರದಾನ ನಡೆಯಲೇ ಇಲ್ಲ. ಪದಕ ಕೇವಲ ಹೇಳಿಕೆ ಹಾಗೂ ಪ್ರಚಾರಕ್ಕಷ್ಟೇ ಸೀಮಿತವಾಗಿದೆ ಎಂಬುದು ಸಿಬ್ಬಂದಿ ಅಳಲು.

ಇಲಾಖೆ ಬಗ್ಗೆ ಅನಾದರ: ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಾಕಿಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪ್ರದಾನ ಸಮಾರಂಭ ನಡೆದರೂ, ಅರಣ್ಯ ಇಲಾಖೆ ಕಾರ್ಯಕ್ರಮ ಮಾತ್ರ ನಡೆಯಲೇ ಇಲ್ಲ. ಇದು ಇಲಾಖೆ ಬಗ್ಗೆ ಜನಪ್ರತಿನಿಧಿಗಳಿಗಿರುವ ಅನಾದರವನ್ನು ಎತ್ತಿ ತೋರಿಸುತ್ತಿದೆ ಎಂದು ಸಿಬ್ಬಂದಿ ದೂರಿದ್ದಾರೆ.

ವಿಳಂಬಕ್ಕೇನು ಕಾರಣ?
ಏಪ್ರಿಲ್‌ನಲ್ಲಿ ಅಂದಿನ ಅರಣ್ಯ ಸಚಿವ ಬಿ.ರಮಾನಾಥ ರೈ ಪ್ರಶಸ್ತಿ ಘೋಷಣೆ ಮಾಡಿದ್ದರು. ಬಳಿಕ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಅಡ್ಡಿ ಎದುರಾಗಿತ್ತು. ನಂತರ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಪದಕ ನೀಡುವ ಮನ ಮಾಡಲಿಲ್ಲ. ಬಳಿಕ ಉಪ ಚುನಾವಣೆ ನೀತಿ ಸಂಹಿತೆ ವಿಘ್ನ ಎದುರಾಯಿತು. ಇದೀಗ ಮುಖ್ಯಮಂತ್ರಿ ದಿನಾಂಕ ನಿಗದಿಯಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

 

ಇಲಾಖೆ ವತಿಯಿಂದ ಎಲ್ಲ ತಯಾರಿ ನಡೆದರೂ ಪದಕ ಪ್ರದಾನ ಸಮಾರಂಭಕ್ಕೆ ದಿನ ನಿಗದಿಯಾಗುತ್ತಿಲ್ಲ. ಮುಖ್ಯಮಂತ್ರಿ ಅವರಿಗೆ ದಿನಾಂಕ ನಿಗದಿಪಡಿಸಲು ಈಗಾಗಲೇ 2-3 ಬಾರಿ ಮನವಿ ಕಳುಹಿಸಿದ್ದೇವೆ. ಅವರ ಪ್ರತಿಕ್ರಿಯೆ ಬಂದ ಕೂಡಲೇ ಪದಕ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಪುನಾಟಿ ಶ್ರೀಧರ್, ಅರಣ್ಯ ಕಾರ್ಯಪಡೆ ಮುಖ್ಯಸ್ಥ

 

ಅರಣ್ಯ ಇಲಾಖೆ ಸಿಬ್ಬಂದಿಯ ಬಹುಕಾಲದ ಬೇಡಿಕೆ ಪುರಸ್ಕರಿಸಿ ಯೋಜನೆ ಜಾರಿಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈಗಾಗಲೇ ಪ್ರದಾನ ಕಾರ್ಯಕ್ರಮ ನಡೆಯಬೇಕಿತ್ತು. ಆರಂಭದಲ್ಲೇ ವಿಳಂಬ ಆಗಿರುವುದು ಮುಂದಿನ ವರ್ಷಕ್ಕೂ ತೊಂದರೆಯಾಗಲಿದೆ. ಈ ಬಗ್ಗೆ ಅರಣ್ಯ ಸಚಿವರಲ್ಲಿ ಮಾತನಾಡುತ್ತೇನೆ.
ಬಿ.ರಮಾನಾಥ ರೈ , ಮಾಜಿ ಸಚಿವ