ಜಿ.ನಾಗರಾಜ್ ಬೂದಿಕೋಟೆ
ಅರಣ್ಯ ಹಾಗೂ ಅಂತರ್ಜಲಕ್ಕೆ ಮಾರಕ ಎನಿಸಿರುವ ನೀಲಗಿರಿಯನ್ನು ತೆರವುಗೊಳಿಸಿ ಸಮೃದ್ಧ ಪರಿಸರಕ್ಕೆ ಪೂರಕವಾಗಿ ಹಲವು ಬಗೆಯ ಸಸಿ ನೆಟ್ಟು ಪೋಷಿಸುವ ಮೂಲಕ ದಟ್ಟಾರಣ್ಯ ನಿಮಾರ್ಣಕ್ಕೆ ತಾಲೂಕು ಅರಣ್ಯ ಇಲಾಖೆ ಮುಂದಾಗಿದೆ.
ಬಂಗಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 2 ಸಾವಿರ ಎಕರೆಗೂ ಹೆಚ್ಚು ಅರಣ್ಯಪ್ರದೇಶವಿದೆ. ಆದರೆ, ಇಲ್ಲಿ ನೀಲಗಿರಿಯೇ ಹೆಚ್ಚಾಗಿದೆ. ಯಳೇಸಂದ್ರ ಪಂಚಾಯಿತಿ ವ್ಯಾಪ್ತಿಯ ಪ್ರಾದೇಶಿಕ ಅರಣ್ಯ ಪ್ರದೇಶದ ನೂರಾರು ಎಕರೆಯಲ್ಲಿ ನೀಲಗಿರಿ ಇದೆ. ಸದ್ಯ ಈ ಮರಗಳನ್ನು ತೆರವುಗೊಳಿಸಿ ಬದಲಿಯಾಗಿ ಹೊಂಗೆ, ಬೇವು, ನೇರಳೆ, ಮಹಾಗನಿ, ಬಿದಿರು, ಹುಣಸೆ, ಆಲ, ಅಪ್ಪಿ, ಗೋಣಿ ಸೇರಿ ಹಲವು ಬಗೆಯ ಸಸಿ ನೆಟ್ಟು, ಪೋಷಿಸಲು ಇಲಾಖೆ ದಿಟ್ಟಹೆಜ್ಜೆ ಇಟ್ಟಿದೆ.
ತಾಲೂಕು ಅರಣ್ಯ ಪ್ರದೇಶದಲ್ಲಿ ಜಿಂಕೆ, ಕರಡಿ, ನರಿ, ತೋಳ, ಚಿರತೆ ಸೇರಿ ಹಲವು ಕಾಡು ಪ್ರಾಣಿ ಮತ್ತು ಪಕ್ಷಿಗಳಿದ್ದು, ನೀಲಗಿರಿ ಮರಗಳಿಂದಾಗಿ ಆಹಾರ ಹಾಗೂ ನೀರಿಗೆ ಪರದಾಡುವ ಸ್ಥಿತಿ ಇದೆ. ಆದ್ದರಿಂದ ಸರ್ಕಾರವೇ ಟೆಂಡರ್ ಮೂಲಕ ನೀಲಗಿರಿಯನ್ನು ಬುಡಸಮೇತ ತೆರವು ಮಾಡಿಸಿ, ತರಹೇವಾರಿ ಸಸಿ ನಾಟಿ ಮಾಡಲು ಮುಂದಾಗಿದೆ. ಅದರಲ್ಲೂ ವಿವಿಧ ಹಣ್ಣಿನ ಗಿಡಗಳನ್ನು ಪೋಷಿಸಲು ಮುಂದಾಗಿದ್ದು, ಈ ಮೂಲಕ ಕಾಡು ಪ್ರಾಣಿ&ಪಕ್ಷಿಗಳಿಗೆ ಆಹಾರದ ಸಮಸ್ಯೆ ನೀಗಲಿದ್ದು, ಅರಣ್ಯವೂ ಸಮೃದ್ಧವಾಗಲಿದೆ.

ವನ್ಯಪ್ರಾಣಿಗಳ ಸಂರಕ್ಷಣೆ
ರಾಜ್ಯದ ಅರಣ್ಯ ಪ್ರದೇಶಕ್ಕೆ ಆಂಧ್ರ ಮತ್ತು ತಮಿಳುನಾಡಿನ ಅರಣ್ಯದಿಂದ ಕಾಡಾನೆಗಳು ವಲಸೆ ಬರುವುದು ಸಾಮಾನ್ಯ. ಹೀಗೆ ಬಂದಾಗ ಆಹಾರಕ್ಕಾಗಿ ರೈತರ ಬೆಳೆ ನಾಶ ಮಾಡುವುದು ಮಾಮೂಲಿ. ಅರಣ್ಯ ಪ್ರದೇಶದಲ್ಲೇ ವಿವಿಧ ಸಸಿಗಳ ಜತೆಗೆ ಬಿದಿರನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದರಿಂದ ಆನೆಗಳಿಗೆ ಆಹಾರ ರೂಪವಾಗಿ ಬಿದಿರು ಲಭ್ಯವಾಗುವ ಕಾರಣ ಬೆಳೆ ನಾಶವಾಗುವುದು ತಪ್ಪಲಿದೆ. ತಾಲೂಕು ವ್ಯಾಪ್ತಿಯ ಅರಣ್ಯಪ್ರದೇಶದಲ್ಲಿ ಜಿಂಕೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಗಾಗ ಆಹಾರಕ್ಕಾಗಿ ಜನವಸತಿ ಪ್ರದೇಶ ಮತ್ತು ರಸ್ತೆ ಬದಿ ಬರುವುದು ಹೆಚ್ಚಾಗಿದೆ. ಈ ವೇಳೆ ಬೀದಿನಾಯಿಗಳು ದಾಳಿ ಮಾಡುವುದು ಮತ್ತು ವಾಹನಗಳಿಗೆ ಸಿಲುಕಿ ಮೃತಪಡುವ ಘಟನೆಗಳು ವರದಿಯಾಗುತ್ತಲೇ ಇವೆ. ಕಾಡಿನಲ್ಲಿ ವಿವಿಧ ಹಣ್ಣಿನ ಗಿಡ ಬೆಳೆಸುತ್ತಿರುವುದರಿಂದ ಇಂತಹ ಅವಡ ತಪು$್ಪವ ಜತೆಗೆ ಕಾಡುಪ್ರಾಣಿಗಳ ಪ್ರಭೇದ ರಕ್ಷಣೆಗೂ ಪರೋಕ್ಷವಾಗಿ ಸಹಕಾರಿಯಾಗಲಿದೆ.
ನರೇಗಾ ಸಾಥ್
ಪ್ರತಿ ವರ್ಷ ಮಳೆಗಾಲದಲ್ಲಿ ಅರಣ್ಯ ಇಲಾಖೆ ಅರಣ್ಯ ವೃದ್ಧಿಗೆ ಅಭಿಯಾನ ನಡೆಸುತ್ತದೆಯಾದರೂ ಅರಣ್ಯಇಲಾಖೆಯ ಜತೆಗೆ ವಿವಿಧ ಇಲಾಖೆಗಳು ಜತೆಗೂಡಿ ನರೇಗಾ ಯೋಜನೆಯಡಿ ರಸ್ತೆ ಬದಿಯಲ್ಲೂ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವುದು ವರದಾನವಾಗಿದೆ.
ಮಿನಿ ಮಲೆನಾಡಾಗಲಿದೆಯೇ ಬರದ ನಾಡು?
ತಾಲೂಕಿನ ಯಳೇಸಂದ್ರ ಅರಣ್ಯ ಪ್ರದೇಶ ಮಾತ್ರವಲ್ಲದೆ ಬೋಡಗುರ್ಕಿ ಅರಣ್ಯ ಪ್ರದೇಶದಲ್ಲಿಯೂ ಸುಮಾರು 5 ಸಾವಿರ ವಿವಿಧ ತಳಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಬಂಗಾರಪೇಟೆ ತಾಲೂಕು ಮಾತ್ರವಲ್ಲದೆ ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು, ಕೋಲಾರ ಮತ್ತು ಕೆಜಿಎಫ್ ತಾಲೂಕುಗಳಲ್ಲೂ ನೀಲಿಗಿರಿ ತೆರವುಗೊಳಿಸಿ 20ಕ್ಕೂ ಹೆಚ್ಚಿನ ವಿವಿಧ ಪಭೇದದ ಗಿಡಗಳನ್ನು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ನೆಟ್ಟು ಪೋಷಣೆ ಕಾರ್ಯ ನಡೆಯುತ್ತಿದೆ. ಪೋಷಣೆ ಕಾರ್ಯ ಸರಿಯಾದ ಕ್ರಮದಲ್ಲಿ ನಡೆದಿದ್ದೇ ಆದಲ್ಲಿ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಇರುವ ಕೋಲಾರ ಜಿಲ್ಲೆ ಮುಂದೊಂದು ದಿನ ಮಿನಿ ಮಲೆನಾಡು ಆಗುವುದು ಗ್ಯಾರಂಟಿ.
” ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವುದರಿಂದ ಜಾಗತಿಕ ತಾಪಮಾನ ನಿಯಂತ್ರಂದಲ್ಲಿರುತ್ತದೆ. ಹಾಗೂ ಕಾಡು ವಿಸ್ತರಣೆಯಾಗುತ್ತದೆ. ಇದರಿಂದ ಮಳೆ ಸಮರ್ಪಕವಾಗಿ ಸುರಿದು ಅಂತರ್ಜಲ ವೃದ್ಧಿಯಾಗುವುದರ ಜತೆಗೆ ರೈತರ ಬೇಸಾಯಕ್ಕೆ ಅನುಕೂಲ ಆಗಲಿದೆ. ಇವೆಲ್ಲ ಉದ್ದೇಶದಿಂದಲೇ ಇಲಾಖೆಯು ಅರಣ್ಯೀಕರಣಕ್ಕೆ ಮುಂದಾಗಿದೆ.”
> ಶ್ರೀಲಕ್ಷಿ
ವಲಯ ಅರಣ್ಯಾಧಿಕಾರಿ, ಬಂಗಾರಪೇಟೆ