ಕ್ಷೀಣಿಸುತ್ತಿರುವ ಅರಣ್ಯ ಸಂಪತ್ತು ಸರಿಸಮಗೊಳಿಸಲು 13 ಲಕ್ಷ ಸಸಿ ವಿತರಣೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ದಟ್ಟಾರಣ್ಯ ಹೊಂದಿರುವ ಜಿಲ್ಲೆಯಲ್ಲಿ ಮತ್ತಷ್ಟು ಅರಣ್ಯ ವಿಸ್ತರಣೆಗಾಗಿ ಸಾಮಾಜಿಕ ಅರಣ್ಯ ಇಲಾಖೆ ಪರಿಸರ ಪ್ರಿಯರಿಗಾಗಿ 13.16 ಲಕ್ಷ ಸಸಿಗಳನ್ನು ಬೆಳೆಸಿಕೊಂಡು ಮುಂಗಾರು ಮಳೆಗಾಗಿ ಕಾಯುತ್ತಿದೆ.

ಕೃಷಿ ಚುಟವಟಿಕೆ, ಬಗರ್ ಹುಕುಂನತಂಹ ಅನೇಕ ಕಾರಣಗಳಿಂದ ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಅರಣ್ಯ ಸಂಪತ್ತು ಸರಿಸಮಗೊಳಿಸಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ತನ್ನ ಏಳು ವಲಯಗಳ ಒಂಭತ್ತು ನರ್ಸರಿಗಳಲ್ಲಿ ವಿವಿಧ ಜಾತಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ವಿತರಿಸಲು ಸಿದ್ಧಗೊಳಿಸಿದೆ.

ಅರಣ್ಯ ಇಲಾಖೆ ಒಂದು ವರ್ಷದಿಂದ ಬೀಜ ನೆಟ್ಟು ಗೊಬ್ಬರ, ನೀರು ಹಾಕಿ ಬೆಳೆಸಿರುವ ಸಸಿಗಳು ನರ್ಸರಿಗಳಲ್ಲಿ ನಳನಳಿಸುತ್ತಿವೆ. ಅಶ್ವಿನಿ ಮಳೆ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದರೂ ಸರಿಯಾಗಿ ಬರುತ್ತಿಲ್ಲ. ಮಳೆ ಉತ್ತಮವಾಗಿ ಬಂದ ನಂತರವೇ ಸಸಿಗಳನ್ನು ನೆಡಲು ಇಲಾಖೆ ಯೋಜನೆ ಹೊಂದಿದೆ.

ಜಿಲ್ಲೆಯ ನರ್ಸರಿಗಳಲ್ಲಿ ಸಸಿ ಬೆಳೆಸಲು 2.31 ಕೋಟಿ ರೂ. ವೆಚ್ಚ ಮಾಡಿರುವ ಸಾಮಾಜಿಕ ಅರಣ್ಯ ಇಲಾಖೆ ಒಟ್ಟು 13,16,670 ಸಸಿಗಳನ್ನು ಬೆಳೆಸಿ ವಿತರಣೆಗೆ ಸಿದ್ಧಗೊಳಿಸಿದೆ. ಜೂ.1ರಿಂದ ರೈತರು, ಪರಿಸರ ಪ್ರಿಯರು, ಗ್ರಾಪಂಗಳಿಗೆ ಸಸಿ ವಿತರಣೆ ಮಾಡಲು ಇಲಾಖೆ ಯೋಜನೆ ರೂಪಿಸಿದೆ.

ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆ, ಸಾಮಾಜಿಕ ಅರಣ್ಯ ಯೋಜನೆ, ರಸ್ತೆ ಬದಿ ನೆಡುತೋಪು, ಗ್ರಾಮ ಪಂಚಾಯಿತಿ, ಭದ್ರಾ ಮೇಲ್ದಂಡೆ ಸೇರಿ ನಾನಾ ವಿಭಾಗದಲ್ಲಿ ಸಸಿ ನೆಡುವ ಕಾರ್ಯಕ್ರಮ ರೂಪಿಸಿದೆ. ಕೆಲ ಯೋಜನೆಗಳು ಸಾರ್ವಜನಿಕ ಸಹಭಾಗಿತ್ವದಲ್ಲಿ ಹಾಗೂ ಇಲಾಖೆಯಿಂದ ನೇರವಾಗಿ ಅನುಷ್ಠಾನ ಮಾಡಲಾಗುತ್ತಿದೆ.

ಸಾಮಾಜಿಕ ಅರಣ್ಯ ಇಲಾಖೆ ಸಾರ್ವಜನಿಕ ವಿತರಣೆ ವ್ಯವಸ್ಥೆಯಡಿ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಆಸಕ್ತರು ನಿಗದಿಪಡಿಸಿರುವ ದರ 1-3 ರೂ. ಪಾವತಿಸಿ ಸಸಿಗಳನ್ನು ತೆಗೆದುಕೊಂಡು ಹೋಗಬಹುದು. ಈ ಸಸಿಗಳನ್ನು ನೆಟ್ಟು ಮೂರು ವರ್ಷದ ತನಕ ಬೆಳೆಸಲು ಇಲಾಖೆ ಒಂದು ಸಸಿಗೆ 100 ರೂ. ನೀಡುತ್ತದೆ. ಈ ಯೋಜನೆಯಡಿಯೂ ರೈತರು ಸಸಿ ಪಡೆಯಲು ಆಸಕ್ತರಾಗಿದ್ದಾರೆ.

ಉದ್ಯೋಗ ಖಾತ್ರಿ ಸಹಾಯಧನ : ಅರಣ್ಯೀಕರಣ ವೃದ್ಧಿಗಾಗಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಮೂಲಕ ಆಯ್ದ ರೈತರಿಗೆ ಉಚಿತ ಸಸಿ ನೀಡುವ ಯೋಜನೆ ರೂಪಿಸಿದೆ. ಉಚಿತ ಸಸಿ ನೀಡುವುದರ ಜತೆ ಸಸಿ ನೆಡಲೂ ರೈತರಿಗೆ ಹಣ ನೀಡುವ ನಿಯಮ ರೂಪಿಸಿದೆ. ಯೋಜನೆ ಅನುಷ್ಠಾನ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆಯದಾಗಿದ್ದರೆ, ಗ್ರಾಪಂ ರೈತರಿಗೆ ಹಣ ಕೊಡಬೇಕು. 89 ಇಂಚಿನ ಗಾತ್ರದ ಪ್ಯಾಕೆಟ್​ನಲ್ಲಿ ಬೆಳೆಸಿದ ಸಸಿ ನೆಡಲು 36 ರೂ., 812 ಗಾತ್ರ ಪ್ಯಾಕೆಟ್​ನ ಸಸಿ ನೆಡಲು 62 ರೂ. ಗ್ರಾಪಂನಿಂದ ರೈತರಿಗೆ ನೀಡಲಾಗುವುದು. ನೆಟ್ಟ ಸಸಿಗಳನ್ನು ನಿರ್ವಹಣೆ ಮಾಡಲೂ ಉದ್ಯೋಗ ಖಾತ್ರಿ ಯೋಜನೆ ನೆರವು ರೈತರು ಪಡೆಯಬಹುದು.

ಗ್ರಾಪಂಗೆ ಉಚಿತ ಸಸಿ: ಕೆಲ ಆಯ್ದ ಗ್ರಾಪಂಗಳಿಗೆ ಇಲಾಖೆ ಸಸಿಗಳನ್ನು ಬೆಳೆಸಿ ಉಚಿತವಾಗಿ ನೀಡಲಿದೆ. ಕೆಲ ಗ್ರಾಪಂಗಳು ತಮ್ಮ ವ್ಯಾಪ್ತಿಯ ಅಕೇಶಿಯ, ಸಿಲ್ವರ್ ಮರ ಕಡಿದು ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಅರಣ್ಯ ಇಲಾಖೆಗೆ ಕಳೆದ ವರ್ಷ ನೀಡಿದ್ದವು. ಈ ಹಣದಲ್ಲಿ ಇಲಾಖೆ ಸಸಿ ಬೆಳೆಸಿ ಸಂಬಂಧಿಸಿದ ಗ್ರಾಪಂಗಳಿಗೆ ನೀಡುತ್ತದೆ. ಗ್ರಾಪಂ ಈ ಸಸಿಗಳನ್ನು ತಮ್ಮ ವ್ಯಾಪ್ತಿಯ ರೈತರಿಗೆ ನೀಡುತ್ತದೆ.

ಚಿಕ್ಕಮಗಳೂರು ತಾಲೂಕಿನ ಮಳಲೂರು, ಕೂದುವಳ್ಳಿ, ಕೆ.ಆರ್.ಪೇಟೆ, ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ, ಬಿ.ಹೊಸಳ್ಳಿ, ಕಿರುಗುಂದ, ಫಲ್ಗುಣಿ ಗ್ರಾಪಂಗಳಿಗೆ ಈ ವ್ಯವಸ್ಥೆಯಡಿ 67 ಸಾವಿರ ಸಸಿ ವಿತರಿಸಲಾಗುತ್ತಿದೆ.

ಸಿಲ್ವರ್, ಹೆಬ್ಬೇವಿಗೆ ಬೇಡಿಕೆ: ರೈತರು ತೋಟ, ಹೊಲಗಳ ಬದುಗಳಲ್ಲಿ ಸಿಲ್ವರ್, ಹೆಬ್ಬೇವು ಮರಳ ಬೆಳೆಸಲು ಆಸಕ್ತರಾಗಿರುವುದರಿಂದ ಹೆಚ್ಚು ಬೆಡಿಕೆ ಇದೆ. ಸಿಲ್ವರ್, ಹೆಬ್ಬೇವು ಸಸಿಗಳು 10-15 ವರ್ಷದಲ್ಲಿ ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ಇದು ರೈತರಿಗೆ ಆರ್ಥಿಕವಾಗಿ ಲಾಭಕರವಾಗಿದೆ. ಹೀಗಾಗಿ ಇಲಾಖೆ ಕೂಡ ಈ ಎರಡೂ ಜಾತಿ ಸಸಿಗಳನ್ನು ಹೆಚ್ಚಾಗಿ ಬೆಳೆಸಿದೆ.

ಇಲ್ಲಿ ಸಸಿಗಳು ಲಭ್ಯ: ಜಿಲ್ಲೆಯ ಒಂಭತ್ತು ನರ್ಸರಿಗಳಲ್ಲಿ ವಿವಿಧ ಜಾತಿಯ ಸಸಿಗಳು ಲಭ್ಯ. ಸಮೀಪದ ರೈತರು ಇಲ್ಲಿ ಆಗಮಿಸಿ ಸಸಿ ಪಡೆಯಬಹುದು. ಗ್ರಾಪಂ ಆಯ್ಕೆ ಮಾಡಿದ ರೈತರಿಗೆ ಉಚಿತವಾಗಿ ಸಸಿ ನೀಡಲಾಗುತ್ತದೆ. ಚಿಕ್ಕಮಗಳೂರು ತಾಲೂಕಿನ ಮತ್ತಾವರ, ನಿಡಗೋಡು, ಸಬ್ಬೇನಹಳ್ಳಿ, ಕಡೂರು ತಾಲೂಕಿನ ಕಡೂರು ಪಟ್ಟಣ, ಕೊಪ್ಪಲು, ತರೀಕೆರೆ ತಾಲೂಕಿನ ಬಾವಿಕೆರೆ, ಕೊಪ್ಪ ತಾಲೂಕಿನ ನರಸೀಪುರ, ಶೃಂಗೇರಿಯ ತುಂಗಾ, ಎನ್.ಆರ್.ಪುರದ ಸಿಂಸೆಯ ನರ್ಸರಿಗಳಲ್ಲಿ ಸಸಿ ದೊರಯುತ್ತವೆ.

Leave a Reply

Your email address will not be published. Required fields are marked *