More

    ಪೆರಾಡಿ ನಡ್ತಿಕಲ್ಲು ದರ್ಖಾಸಿನಲ್ಲಿರುವ ಜಾಗಕ್ಕೆ ಅರಣ್ಯ ಇಲಾಖೆ ಗಾಳ

    ಬೆಳ್ತಂಗಡಿ: ತಾಲೂಕಿನ ಪೆರಾಡಿ ನಡ್ತಿಕಲ್ಲು ದರ್ಖಾಸಿನಲ್ಲಿ ನೆಲೆಸಿರುವ ದಲಿತ ಕುಟುಂಬ, ಅರಣ್ಯ ಇಲಾಖೆ ತಮಗೆ ಅನಗತ್ಯ ಕಿರುಕುಳ ನೀಡುತ್ತಿದ್ದು, ನ್ಯಾಯ ಒದಗಿಸುವಂತೆ ಲೋಕಾಯುಕ್ತಕ್ಕೆ ಮೊರೆ ಹೋಗಿದೆ.
    ನಡ್ತಿಕಲ್ಲು ದರ್ಖಾಸು ದುರ್ಗಾದಯ ಮನೆಯ ದಿ.ಕೊರಗ ಅವರ ಪುತ್ರ ಕಾಜು ಎಂಬುವರಿಗೆ 1972ರಲ್ಲಿ ಡಿಸಿ ಮನ್ನಾದಡಿ 7.10ಎಕರೆ ಜಾಗ ಮಂಜೂರಾಗಿತ್ತು. ಕಾಜು ಅವರಿಗೆ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ. ಹೆಣ್ಣು ಮಕ್ಕಳಿಗೆ ಮದುವೆಯಾಗಿ ದೆ. ಈಗ ಕಾಜು, ಪುತ್ರ ರಮೇಶ್ ಮತ್ತು ಅವರ ಕುಟುಂಬ ಇಲ್ಲಿ ನೆಲೆಸಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕಾಜು, ತಮಗೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಲೇ ಇದೆ ಎಂದು ಆರೋಪಿಸಿದ್ದಾರೆ.

    ತಕರಾರೇನು? ಇವರಿಗೆ 1972ರಲ್ಲಿ ಜಮೀನು ಮಂಜೂರಾಗಿತ್ತು. ಆದರೆ, ಅರಣ್ಯ ಇಲಾಖೆಯ ದಾಖಲೆ ಪ್ರಕಾರ, ಈ ಜಮೀನು 1984ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದೆ! ಇದೇ ಆಧಾರದಲ್ಲಿ 2002ರಲ್ಲಿ ಅರಣ್ಯ ಇಲಾಖೆ, ಕಾಜು ಅವರಿಗೆ ಜಮೀನು ಅತಿಕ್ರಮಣ ಮಾಡಿದ್ದೀರಿ ಎಂದು ನೋಟಿಸ್ ನೀಡಿತ್ತು. ಈ ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಮಾಡಲು ಕೂಡ ಅರಣ್ಯ ಇಲಾಖೆ ತಡೆಹಿಡಿಯಿತು.
    1972ರಲ್ಲಿ ದಲಿತ ಕುಟುಂಬಕ್ಕೆ ಮಂಜೂರಾದ ಜಮೀನು 1984ರಲ್ಲಿ ಅರಣ್ಯ ಇಲಾಖೆಗೆ ಹೇಗೆ ವರ್ಗಾವಣೆಯಾಯಿತು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ತಮ್ಮ ಜಮೀನನ್ನು ತಮಗೇ ನೀಡಿ ಎಂದು ಈ ಕುಟುಂಬ ಎರಡು ದಶಕಗಳಿಂದ ಕಚೇರಿಗಳಿಗೆ ಅಲೆದಾಡುತ್ತಲೇ ಇದೆ. ಆದರೆ ಎಲ್ಲಿಯೂ ಸರಿಯಾದ ಮಾಹಿತಿ ಲಭಿಸಿಲ್ಲ. ಸರ್ಕಾರ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಿದ್ದ ಭೂಮಿಯನ್ನು ಯಾವ ರೀತಿ ಅರಣ್ಯ ಇಲಾಖೆಗೆ ಮರುಹಂಚಿಕೆ ಮಾಡಿದೆ ಎಂಬುದು ಗೊತ್ತಿಲ್ಲ. ಈ ದಲಿತ ಕುಟುಂಬ ತಮಗೆ ದಕ್ಕಿದ ಭೂಮಿ ಉಳಿಸಿಕೊಳ್ಳಲು ನಿರಂತರ ಹೋರಾಟ ಮಾಡಬೇಕಾಗಿದೆ.

    ಮನೆ ನವೀಕರಣವೂ ಸಾಧ್ಯವಾಗುತ್ತಿಲ್ಲ. ಕಾಜು ಅವರು ಕೂಲಿಗಾಗಿ ಹೋಗಬೇಕಾಗುತ್ತದೆ. ಮನೆಯಲ್ಲಿ ಅವರ ಸೊಸೆ ಮತ್ತು ಮೊಮ್ಮಗ ಮನೆಯಲ್ಲಿರುವ ಕಾರಣ, ಇಲಾಖೆಯವರ ಕಿರುಕುಳ ತಪ್ಪುತ್ತಿಲ್ಲ. ಇದರಿಂದಾಗಿ ಮನೆಮಂದಿ ಬೇಸರದಿಂದ ಕಾಲಕಳೆಯುವಂತಾಗಿದೆ. ಅಡುಗೆ ಮಾಡಲು ಒಣಕಟ್ಟಿಗೆ ತರಲು ಹೋದರೆ ಅರಣ್ಯ ಇಲಾಖೆ ಸಿಬ್ಬಂದಿ ನೂರಾರು ಪ್ರಶ್ನೆ ಕೇಳಿ ಹಿಂಸೆ ನೀಡುತ್ತಿರುವ ಬಗ್ಗೆಯೂ ಆರೋಪ ಕೇಳಿಬರುತ್ತಿದೆ.

    ಕಾಜು ಕುಟುಂಬಕ್ಕೆ 1972ರಲ್ಲಿ ಸರ್ಕಾರದ ಆದೇಶದಂತೆ ಜಾಗ ಮಂಜೂರಾಗಿತ್ತು. ಆದರೆ 1986ರಲ್ಲಿ ಅರಣ್ಯ ಇಲಾಖೆ ಜಮೀನನ್ನು ತನ್ನ ಸ್ವಂತ ಇಚ್ಛೆಯ ಪ್ರಕಾರ ವರ್ಗಾಯಿಸಿಕೊಂಡಿದೆ ಎಂದು ಕಾಜು ಅವರ ಮಗ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಒಂದು ವೇಳೆ ಕಳಬಳಿಕೆ ಆಗಿದ್ದರೆ ಕಾನೂನು ಮತ್ತು ಸರ್ಕಾರದ ಆದೇಶ ಉಲ್ಲಂಘನೆ ಆಗುತ್ತದೆ. ಲೋಕಾಯುಕ್ತ ತನಿಖೆ ನಡೆಸುತ್ತಿದೆ.
    – ಭಾರತಿ, ಲೋಕಾಯುಕ್ತ ಇನ್ಸ್‌ಪೆಕ್ಟರ್, ಮಂಗಳೂರು

    ನಾವು ಕಟ್ಟಿಗೆ ತರಲು ಹೋದರೂ ಅರಣ್ಯ ಇಲಾಖೆ ಸಿಬ್ಬಂದಿ ಅಡ್ಡಿಪಡಿಸುತ್ತಾರೆ. ಜಮೀನಿನಲ್ಲಿ ಕೃಷಿ ಕಾರ್ಯ ನಡೆಸಲು ಬಿಡುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಅನಗತ್ಯ ಕಿರುಕುಳ ನೀಡುವ ಮೂಲಕ ನಮ್ಮ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ.
    ಪ್ರೇಮ, ಕಾಜು ಅವರ ಸೊಸೆ

    ನನಗೆ ಮಾಹಿತಿ ಇಲ್ಲ. ವಿಜಯವಾಣಿ ವರದಿಯಿಂದ ತಿಳಿದೆ. ಸರ್ಕಾರದ ಆದೇಶ ಮತ್ತು ಅವರಿಗೆ ಮಂಜೂರಾತಿ ಆದೇಶ ಬಗ್ಗೆ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಈ ಕುಟುಂಬಕ್ಕೆ ನ್ಯಾಯ ಒದಗಿಸಲು ಬದ್ಧ.
    ಗಣಪತಿ ಶಾಸ್ತ್ರಿ, ತಹಸಿಲ್ದಾರ್, ಬೆಳ್ತಂಗಡಿ


    ಮನು ಬಳಂಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts