ಅರಣ್ಯ ಸಂರಕ್ಷಣೆಗಾಗಿ ಪ್ರತಿ ವರ್ಷ ಮಾರ್ಚ್ 21ರಂದು ಅಂತಾರಾಷ್ಟ್ರೀಯ ಅರಣ್ಯ ದಿನ ಅಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ‘ಅರಣ್ಯಗಳು ಮತ್ತು ಆಹಾರ’ ಘೋಷವಾಕ್ಯ ಅಡಿಯಲ್ಲಿ ಕಾರ್ಯಕ್ರಮ ನಡೆಯಲಿವೆ. ಈ ನಿಮಿತ್ತ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹಿರಿಯ ಐಎಫ್ಎಸ್ ಅಧಿಕಾರಿ ಮೀನಾಕ್ಷಿ ನೇಗಿ ಅವರೊಂದಿಗೆ ವಿಜಯವಾಣಿ ನಡೆಸಿದ ಸಂವಾದದ ವಿವರ ಇಲ್ಲಿದೆ.
- ಅಗ್ನಿಅವಘಡ, ವನ್ಯಜೀವಿ ಹಾವಳಿ ತಡೆಗೆ ತಂತ್ರಜ್ಞಾನ ಬಳಕೆ
- ಕಾಡು ಸಂರಕ್ಷಣೆಯಲ್ಲಿ ಎಐ, ಡ್ರೋನ್, ಹೊಸ ಆಪ್ಗೆ ಮೊರೆ
ವನ ಸಂಪತ್ತು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜತೆಗೆ ಜನ ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ವನ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆ ಜನರಲ್ಲಿ ಮೂಡಿದಾಗ ವನಸಿರಿ, ವನ್ಯಜೀವಿ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಅತ್ಯಗತ್ಯ ಎಂದು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮೀನಾಕ್ಷಿ ನೇಗಿ ಪ್ರತಿಪಾದಿಸಿದ್ದಾರೆ.
ರಾಜ್ಯದ ಒಟ್ಟು ಭೂ ಪ್ರದೇಶದಲ್ಲಿ ಶೇಕಡ 21 ಅರಣ್ಯ ಇದೆ. ಇದೂ ಸೇರಿ ಕೃಷಿ ಭೂಮಿ, ಉದ್ಯಾನ ಒಳಗೊಂಡು ಶೇ. 33 ಭೂ ಭಾಗ ಮರಗಳಿಂದ ಆವೃತವಾಗಿದೆ. ಕರ್ನಾಟಕದಲ್ಲಿ ಇಷ್ಟು ಪ್ರಮಾಣದಲ್ಲಿ ಅರಣ್ಯ ರಕ್ಷಣೆ ಆಗಿರುವುದು ಸುಲಭದ ಮಾತಲ್ಲ. ಈ ಕಾರ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ. ಕರುನಾಡನ್ನು ವನ್ಯ ಸಂಪತ್ತಿನ ತಾಣವಾಗಿಸಲು ಇಲಾಖೆ ಜತೆ ಜನ ಹೆಜ್ಜೆ ಹಾಕಬೇಕಾದ ಅಗತ್ಯ ಇದೆ ಎಂದರು.
ಕಾನೂನು ಬಿಗಿಯಿಂದ ಅರಣ್ಯ ಉಳಿವು: ಅರಣ್ಯ ಒತ್ತುವರಿ ಈಗ ಸಮಸ್ಯೆ ಆಗುತ್ತಿಲ್ಲ. ಈ ಹಿಂದೆ ಆಗಿರುವ ಒತ್ತುವರಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ದೇಶದ ಕಾನೂನು ಬಲವಾಗಿದೆ. ಯಾರೂ ಅಷ್ಟು ಸುಲಭವಾಗಿ ಅರಣ್ಯ ಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ. ಅಂತಹ ಕಾರ್ಯ ಮಾಡಲೆತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರೈಲ್ವೆ ಮಾರ್ಗ, ಅಣೆಕಟ್ಟು, ನೀರು ಕಾಲುವೆ, ರಸ್ತೆ ನಿರ್ಮಾಣ ಇತ್ಯಾದಿ ಸೌಕರ್ಯಕ್ಕೆ ಅರಣ್ಯ ಜಮೀನು ಅಗತ್ಯವಿರುತ್ತದೆ. ಅದಕ್ಕಾಗಿಯೇ 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರವೇ ಯೋಜನೆಗಳಿಗೆ ಅರಣ್ಯದ ಜಮೀನು ನೀಡಲಾಗುತ್ತದೆ. ಅದರ ಹೊರತಾಗಿ ಯಾವುದೇ ಒತ್ತಡ ಬಂದರೂ ನಿಯಮ ಮೀರಿ ಮಂಜೂರು ಮಾಡುವುದಿಲ್ಲ ಎಂದರು.
ಲಂಟಾನ ಸಮಸ್ಯೆಗೆ ಮೌಲ್ಯವರ್ಧನೆ ಪರಿಹಾರ: ರಾಜ್ಯದ ಕಾಡುಗಳಲ್ಲಿ ಲಂಟಾನ ಸಸ್ಯ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಲಂಟಾನ ಇರುವ ಜಾಗದಲ್ಲಿ ಬೇರೆ ಗಿಡ ಮರಗಳು ಬೆಳೆಯಲು ಸಾಧ್ಯವಾಗದ ಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಲಂಟಾನವನ್ನು ಕರಕುಶಲ ಕಲಾವಿದರಿಗೆ ಉಚಿತವಾಗಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಬಹುದು. ಇದಕ್ಕಾಗಿ ಮಾರುಕಟ್ಟೆಯ ಸರಪಳಿ ರೂಪಿಸಬೇಕಿದೆ. ಮಹಿಳಾ ಸ್ವ ಸಹಾಯ ಗುಂಪುಗಳನ್ನು ಬಳಸಿಕೊಂಡು ಪಾರಂಪರಿಕ ಕರಕುಶಲ ವಸ್ತುಗಳನ್ನು ರೂಪಿಸಿ ಮಾರಾಟ ಮಾಡುವ ಕಾರ್ಯಕ್ರಮ ರೂಪಿಸುವ ಚಿಂತನೆ ನಡೆಸಲಾಗಿದೆ.
ತಂತ್ರಜ್ಞಾನ ಸಮರ್ಪಕ ಬಳಕೆ: ಪ್ರಸ್ತುತ ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಕಾರ್ಯದಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ. ಕೃತಕ ಬುದ್ಧಿಮತ್ತೆ, ಡ್ರೋನ್ ಮತ್ತು ಆಪ್ಗಳಂತಹ ಆಧುನಿಕ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒತ್ತುವರಿ ವಿಚಾರವಾಗಿ ಈಗ ಎಲ್ಲವೂ ಡಿಜಿಟಲೈಸ್ಡ್ ಕಾಪಿ ಇದೆ. ಅದನ್ನು ಗೂಗಲ್ ಮ್ಯಾಪ್ನಲ್ಲಿ ವೀಕ್ಷಿಸಿದಾಗ ಒತ್ತುವರಿಯ ಮಾಹಿತಿ ಸಿಗಲಿದೆ. ಬೆಂಕಿಯಿಂದ ರಕ್ಷಿಸಲು ಅರಣ್ಯ ಬೆಂಕಿ ತಡೆ ಮತ್ತು ನಿರ್ವಹಣೆ ಯೋಜನೆ ಜಾರಿಯಲ್ಲಿದೆ. ಇದರಡಿ ಬೆಂಕಿ ನಿಯಂತ್ರಣ ಕ್ರಮಗಳು, ನೀರು ಸಂಗ್ರಹ ತೊಟ್ಟಿಗಳ ನಿರ್ಮಾಣ, ಆಧುನಿಕ ಅಗ್ನಿಶಾಮಕ ಸಾಧನಗಳ ಖರೀದಿ, ಕಾಡಿನ ಬೆಂಕಿ ನಿಯಂತ್ರಣಕ್ಕೆ ಸಂಬಂಧಿಸಿ ಜಾಗೃತಿ ಅಭಿಯಾನ ಮುಂತಾದ ಕಾರ್ಯ ನಡೆಯುತ್ತಿವೆ.
ರಾತ್ರಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ: ಮೈಸೂರಿನ ಬಂಡೀಪುರ ಅರಣ್ಯ ಮಾರ್ಗವಾಗಿ ಕೇರಳಕ್ಕೆ ತೆರಳಲು ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಲಹೆ ಕೇಳಿಬಂದಿದೆ. ಇದರಿಂದ ಪ್ರವಾಸೋದ್ಯಮಕ್ಕೂ ಅನುಕೂಲವಾಗುವುದೆಂಬ ವಾದ ಮುಂದಿಡಲಾಗಿದೆ. ಆದರೆ, ಅರಣ್ಯ ಇಲಾಖೆ ಈ ಪ್ರಸ್ತಾಪವನ್ನು ಒಪ್ಪಿಲ್ಲ. ರಾತ್ರಿ ತೆರಳಬೇಕು ಎನ್ನುವವರು ಬೆಳಗ್ಗೆಯಿಂದ ಸಂಜೆವರೆಗೂ ಆ ರಸ್ತೆಯಲ್ಲಿ ಹೋಗಲು ಅವಕಾಶ ಇದೆ. ವನ್ಯಜೀವಿಗಳಿಗೆ ತೊಂದರೆ ನೀಡಿ ರಾತ್ರಿ ಸವಾರಿ ಸರಿಯಲ್ಲ ಎಂದರು.
ತಂತ್ರಜ್ಞಾನ ಬಳಕೆಯಿಂದ ಪರಿಹಾರ: ಮಾನವ-ವನ್ಯಜೀವಿ ಸಂಘರ್ಷ ನಾನಾ ಸಮಸ್ಯೆಗಳನ್ನು ತಂದೊಡ್ಡಿವೆ. ಆನೆ ಸೇರಿ ಪ್ರಾಣಿಗಳ ಸಂಚಾರಕ್ಕೆ ಅಡ್ಡಿ ಆಗದಂತೆ ಕಾರಿಡಾರ್ ಮುಕ್ತವಾಗಿರಬೇಕು. ಆದರೀಗ ಇವುಗಳ ಮಧ್ಯೆ ಜನವಸತಿ ಬಂದಿದ್ದು, ಅಲ್ಲೆಲ್ಲ ಪ್ರಾಣಿಗಳ ಓಡಾಟಕ್ಕೆ ಕಷ್ಟವಾಗಿದೆ. ಆನೆಗಳ ಉಪಟಳಕ್ಕೆ ಕಾಲರ್ ಅಳವಡಿಸಿ ಡ್ರೋನ್ ಮೂಲಕ ಅವುಗಳ ಸಂಚಾರ, ವಾಸ್ತವ್ಯ ತಿಳಿದು ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿದೆ.
ಇಲಾಖೆ ಜಾರಿ ಮಾಡಲಿರುವ ಕೆಲ ಕಾರ್ಯಕ್ರಮಗಳು
- ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ’ ಶೀಘ್ರ ಆರಂಭ.
- ಮಾನವ-ಆನೆ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮುಂದುವರಿಕೆ.
- ರೈತರ ಬೆಳೆಗಳಿಗೆ ಹಾನಿಯಾದಾಗ ಪರಿಹಾರ ನೀಡಿಕೆಗೆ ವಿಶೇಷ ಒತ್ತು.
- 540 ಆರ್ಎಫ್ಎಸ್ ಹುದ್ದೆಗಳಿಗೆ ನೇಮಕಾತಿ.
- ವಿದ್ಯಾರ್ಥಿಗಳಲ್ಲಿ ಅರಣ್ಯ, ವನ್ಯಜೀವಿ ಬಗ್ಗೆ ಅರಿವು, ಗಿಡ ನೆಡುವಿಕೆಗೆ ಉತ್ತೇಜನ.
ಅಭಿವೃದ್ಧಿಗೆ ಅರಣ್ಯ ಜಮೀನು ಬಳಕೆ
ಜನರಿಗೆ ಮೂಲಸೌಕರ್ಯ ಕಲ್ಪಿಸಲು ಅರಣ್ಯದ ಜಮೀನು ಬಳಕೆ ಹಾಗೂ ಮಂಜೂರಾತಿಗೆ ಇಲಾಖೆಯ ಮೇಲೆ ನಿರಂತರವಾಗಿ ಒತ್ತಡ ಬರುತ್ತಿದೆ. ಅದರಲ್ಲೂ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ಜಾಗ ನೀಡುವಂತೆ ಪ್ರಸ್ತಾವನೆಗಳ ಮಹಾಪೂರವೇ ಹರಿದುಬರುತ್ತಿದೆ. ಇವುಗಳಲ್ಲಿ ಅಗತ್ಯವಿರುವುದನ್ನು ಒಪ್ಪಿ ಜಮೀನು ನೀಡಲು ಇಲಾಖೆ ಸಿದ್ಧವಿದೆ. ಆದರೆ, ಜಮೀನನ್ನು ಕಾನೂನು ಹಾಗೂ ನಿಯಮಾವಳಿ ಅಡಿಯಲ್ಲಷ್ಟೇ ಕೊಡಲಾಗುವುದು ಎಂದು ಪಿಸಿಸಿಎಫ್ ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಸಂರಕ್ಷಣೆಯಲ್ಲಿ ಕರ್ನಾಟಕವು ಇತರ ರಾಜ್ಯಗಳಿಗಿಂತ ಮುಂದಿದೆ. ಇನ್ನಷ್ಟು ಸುಧಾರಣೆ ತರಲು ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಿದ್ದೇವೆ. ಇತರ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಿದ್ದೇವೆ. ಮುಖ್ಯವಾಗಿ ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ವಿಚಾರವಾಗಿ ಕಾಡಂಚಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಒತ್ತು ನೀಡಿದ್ದೇವೆ.
| ಮೀನಾಕ್ಷಿ ನೇಗಿ, ಪಿಸಿಸಿಎಫ್ ಕರ್ನಾಟಕ
ಅರಣ್ಯ ಸಿಬ್ಬಂದಿಗೆ ವಿಮೆಶೀಘ್ರ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ
ಜೀವದ ಹಂಗು ತೊರೆದು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಫಾರೆಸ್ಟ್ ವಾಚರ್ಸ್ ಸೇರಿ ಎಲ್ಲ ಅರಣ್ಯ ಸಿಬ್ಬಂದಿಗೂ ಗುಂಪು ಜೀವ ವಿಮೆ ಸೌಲಭ್ಯ ಒದಗಿಸಲು ಚರ್ಚೆ ನಡೆದಿದೆ. ಜತೆಗೆ ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿರುವ ಕ್ಯಾಂಟೀನ್ ಸವಲತ್ತು ಮಾದರಿಯಲ್ಲಿ ಅರಣ್ಯ ನೌಕರರಿಗೂ ವಿಸ್ತರಿಸುವ ಬಗ್ಗೆ ಇಲಾಖಾ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ.
ಸದಾ ಸವಾಲಿನೊಂದಿಗೆ ಕರ್ತವ್ಯ ನಿರ್ವಹಿಸುವ ನಮ್ಮ ಸಿಬ್ಬಂದಿಗೆ ಜೀವದ ಬಗ್ಗೆ ಭದ್ರತೆ ಅತಿ ಮುಖ್ಯವಾಗಿರುತ್ತದೆ. ಮಾನವೀಯ ದೃಷ್ಟಿಯಿಂದಲೂ ಇಂಥದ್ದೊಂದು ಸೌಲಭ್ಯವನ್ನು ಒದಗಿಸುವುದು ನಾಗರಿಕ ಸರ್ಕಾರದ ಕರ್ತವ್ಯವೂ ಆಗಿರುತ್ತದೆ. ಬೆಲೆಕಟ್ಟಲಾಗದ ಕಾಡಿನ ಸಂಪತ್ತನ್ನು ರಕ್ಷಿಸಿ ಸರ್ಕಾರ ಹಾಗೂ ಸಮಾಜಕ್ಕೆ ಒಳಿತನ್ನುಂಟು ಮಾಡುವಲ್ಲಿ ನಿರತವಾಗಿರುವವರಿಗೆ ಗುಂಪು ಜೀವ ವಿಮೆ ನೀಡುವ ಬಗ್ಗೆ ವಿವಿಧ ಹಂತಗಳಲ್ಲಿ ಮಾತುಕತೆ ನಡೆದಿದೆ. ಸರ್ಕಾರದಿಂದಲೇ ವಿಮೆದಾರರ ವಂತಿಗೆ ಪಾವತಿಸುವ ಹಾಗೂ ಎಲ್ಲ ಸಿಬ್ಬಂದಿಗೂ ಬ್ಯಾಂಕ್ ಮೂಲಕ ವೇತನ ಪಾವತಿ ಖಾತೆ ಇದ್ದಲ್ಲಿ ಉದ್ದೇಶಿತ ವಿಮಾ ಸೌಲಭ್ಯ ಜಾರಿಗೆ ಅನುಕೂಲವಾಗಲಿದೆ. ಈ ಸಂಬಂಧ ಶೀಘ್ರವೇ ಇಲಾಖೆಯಿಂದ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಒಪ್ಪಿಗೆ ಪಡೆಯುವ ಯತ್ನ ಮಾಡಲಾಗುವುದು ಎಂದು ನೇಗಿ ಸ್ಪಷ್ಟಪಡಿಸಿದರು.
ಜಂಟಿ ಸಮೀಕ್ಷೆಗೆ ಚಾಲನೆ: ರಾಜ್ಯದಲ್ಲಿ ಕಂದಾಯ ಹಾಗೂ ಅರಣ್ಯ ಜಮೀನು (3.3 ಲಕ್ಷ ಎಕರೆ ವಿಸ್ತೀರ್ಣ) ಬಗ್ಗೆ ಕೆಲವೊಂದು ಗೊಂದಲ ಇತ್ತು. ಈ ವಿಚಾರವಾಗಿ ಸ್ಪಷ್ಟ ಹಾಗೂ ನಿಖರತೆಗಾಗಿ ಎರಡೂ ಇಲಾಖೆಗಳಿಂದ ಜಂಟಿ ಸರ್ವೆ ನಡೆಸುವಂತೆ ಸುಪ್ರೀಂಕೋರ್ಟ್ 6 ತಿಂಗಳ ಕಾಲಾವಕಾಶ ನಿಗದಿಗೊಳಿಸಿ ಆದೇಶಿಸಿದೆ. ಇದರನ್ವಯ ಸರ್ಕಾರ ಸರ್ವೆಗೆ ಬೇಕಾದ ರೂಪುರೇಶೆ ಸಿದ್ಧಪಡಿಸಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಅಧಿಕಾರಿ ಮಟ್ಟದ ಸಮಿತಿ ರಚಿಸಿ ಕೆಲಸ ಕೈಗೆತ್ತಿಕೊಳ್ಳಲು ವೇದಿಕೆ ಕಲ್ಪಿಸಿದೆ. ಸರ್ವೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯ ಶುಕ್ರವಾರ (ಮಾ.21) ಆರಂಭವಾಗಲಿದೆ. ತರಬೇತಿ ಬೆನ್ನಲ್ಲೇ ಸರ್ವೆ ಕಾರ್ಯ ನಡೆಯಲಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ವರದಿಯನ್ನು ಸರ್ಕಾರದ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮಾಟ ಮಂತ್ರ, ಕುತಂತ್ರ! ಪುತ್ರಿಯ ಮಾತು ತಿಳಿಲಿಲ್ಲ; ಪಾಪಿಗಳನ್ನು ಗಲ್ಲಿಗೇರಿಸಲು ಸೌರಭ್ ತಾಯಿ ಪಟ್ಟು | Murder Case