ಜಿಲ್ಲೆಯಲ್ಲಿ ಕಾಡಿದ ಡೀಮ್್ಡ ಫಾರೆಸ್ಟ್ ಸರ್ವೆ ಆರಂಭ

ಚಿಕ್ಕಮಗಳೂರು: ಜಿಲ್ಲಾದ್ಯಂತ ಹಲವು ದಶಕಗಳಿಂದ ಸಮಸ್ಯೆಯಾಗಿರುವ ಪರಿಭಾವಿತ ಅರಣ್ಯ (ಡೀಮ್್ಡ ಫಾರೆಸ್ಟ್) ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

ಹೆಚ್ಚಿನ ಪರಿಭಾವಿತ ಅರಣ್ಯ ಪ್ರದೇಶ ಮೂಡಿಗೆರೆ ತಾಲೂಕಿನಲ್ಲಿದ್ದರೆ ನಂತರದ ಸ್ಥಾನ ಚಿಕ್ಕಮಗಳೂರು ಹಾಗೂ ಶೃಂಗೇರಿಗೆ ಇದೆ. ಸರ್ವೆ ಕಾರ್ಯಕ್ಕೆ ಕಂದಾಯ, ಅರಣ್ಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ 42 ತಂಡ ರಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯ 32 ಹೋಬಳಿ ವ್ಯಾಪ್ತಿಯ 304 ಗ್ರಾಮಗಳ 1,443 ಸರ್ವೆ ಸಂಖ್ಯೆಗಳಲ್ಲಿರುವ 1,07,946 ಹೆಕ್ಟೇರ್ ಭೂಮಿಯನ್ನು ಜಂಟಿ ಸರ್ವೆ ಮೂಲಕ ಈ ತಂಡಗಳು ಗುರುತಿಸಲಿವೆ. ಅರಣ್ಯ ಮತ್ತು ಕಂದಾಯ ಇಲಾಖೆ ಸಮನ್ವಯದಿಂದ ಈ ಕಾರ್ಯ ಕೈಗೆತ್ತಿಕೊಂಡು ಕಾಲಮಿತಿಯಲ್ಲಿ ಮುಂಗಾರು ಆರಂಭಗೊಳ್ಳುವ ಮುನ್ನ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.

ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ದಾಖಲೆಗಳ ಹೊಂದಾಣಿಕೆ ಹಾಗೂ ಸರಿಪಡಿಸುವ ಕೆಲಸ ಇಲಾಖೆಗಳಲ್ಲಿ ಆರಂಭವಾಗುತ್ತದೆ. ಪರಿಭಾವಿತ ಅರಣ್ಯ ಸಮಸ್ಯೆ ನಿವಾರಣೆಯಾದರೆ ಅಂಗನವಾಡಿ ಸೇರಿ ವಿವಿಧ ಇಲಾಖೆಗಳ ಕಟ್ಟಡ ನಿರ್ವಣಕ್ಕೆ, ಅನಧಿಕೃತ ಮನೆಗಳನ್ನು ಅಧಿಕೃತಗೊಳಿಸಲು ಹಾಗೂ ಅರಣ್ಯ-ಕಂದಾಯ ಇಲಾಖೆಗೆ ಸೇರಿದೆ ಎಂಬ ಗೊಂದಲ ನಿವಾರಣೆಗೆ ಪೂರಕವಾಗುತ್ತದೆ ಎಂದು ಹೇಳಿದರು.

ಸೋಮವಾರದಿಂದಲೇ ಸರ್ವೆ ಆರಂಭವಾಗಿದೆ. ಪೂರ್ವ ಸಿದ್ಧತೆಗೆ ನಾಲ್ಕು ಸುತ್ತಿನಲ್ಲಿ ಸಭೆ ನಡೆಸಿ ಕೂಲಂಕಷ ಚರ್ಚೆ ನಡೆಸಲಾಗಿದೆ. ಈ ಸರ್ವೆ ಕಾರ್ಯದಲ್ಲಿ ಕಂದಾಯ ಇಲಾಖೆಯೊಂದಿಗೆ ಕೊಪ್ಪ ಮತ್ತು ಚಿಕ್ಕಮಗಳೂರು ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಭೂಮಾಪನ ಇಲಾಖೆ ಉಪನಿರ್ದೇಶಕರು ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *