ಮಾನ್ವಿ: ತಾಲೂಕಿನ ಅಡವಿ ಅಮರೇಶ್ವರ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಶುಕ್ರವಾರ ಅಡವಿ ಅಮರೇಶ್ವರ ಮಠದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಜಾತ್ರೆ ಅಂಗವಾಗಿ ಬೆಳಗ್ಗೆಯಿಂದ ಅಡವಿ ಅಮರೇಶ್ವರ ದೇವರಿಗೆ ವಿಶೇಷ ಪೂಜೆ ಜರುಗಿದವು. ಭಕ್ತರು ನೈವೇದ್ಯ, ಕಾಯಿ ಅರ್ಪಿಸಿದರು. ಸಂಜೆ ವಳಬಳ್ಳಾರಿ ಚನ್ನಬನಸವೇಶ್ವರ ಸುವರ್ಣಗಿರಿ ಮಠದ ಸಿದ್ಧಲಿಂಗ ಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಮಠದ ಶ್ರೀಗಳಾದ ಶ್ರೀಶಾಂತಮಲ್ಲ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಚೀಕಲಪರ್ವಿಯ ಸದಾಶಿವ ಸ್ವಾಮೀಜಿ, ಕರೇಗುಡ್ಡದ ಮಹಾಂತೇಶ್ವರ ಮಠದ ಮಹಾಂತಲಿಂಗ ಸ್ವಾಮೀಜಿ ಇನ್ನಿತರರಿದ್ದರು.