ಪ್ರಧಾನಿ ಮೋದಿ ಸೋಲಿಸಲು ಷ್ಯಡ್ಯಂತ್ರ

ತರೀಕೆರೆ: ಭಾರತ ವಿಶ್ವ ಮಟ್ಟದಲ್ಲಿ ಬಲಶಾಲಿ ಆಗುವುದನ್ನು ಅನ್ಯ ದೇಶ ಇಷ್ಟಪಡುತ್ತಿಲ್ಲವಾದ್ದರಿಂದ ಪ್ರಧಾನಿ ನರೇಂದ್ರ ಮೋದಿ ಸೋಲಿಸಲು ವಿದೇಶಿ ಶಕ್ತಿಯ ಜತೆಗೆ ಮಹಾಘಟಬಂಧನ್ ಭಾರಿ ಷಡ್ಯಂತ್ರ ನಡೆಸುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಲಿಂಗದಹಳ್ಳಿ ಮತ್ತು ದೋರನಾಳು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಸಭೆ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸೋತರೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಸೈನಿಕರ ಆತ್ಮವಿಶ್ವಾಸವೇ ದುರ್ಬಲವಾಗುವ ಸಂಭವವಿದೆ ಎಂದರು.

ಕೇಂದ್ರ ರಸ್ತೆ ನಿಧಿಯಿಂದ 569 ಕೋಟಿ ರೂ. ಅನುದಾನ ತಂದು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅಜ್ಜಂಪುರ ಹಾಗೂ ಶಿವನಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೊಳಿಸಲಾಗಿದೆ. ಪಟ್ಟಣದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆ ಜನರಿಗೆ ತಿಳಿಸಬೇಕಿದೆ. ಚುನಾವಣೆಯಲ್ಲಿ ಗೆಲುವು ನನ್ನದಾದರೆ ಜನರ ಭಾವನೆಗಳಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಭ್ರಷ್ಟರಹಿತ ಆಡಳಿತ ನೀಡುತ್ತೇನೆ ಎಂದು ಭರವಸೆ ನೀಡಿದರು.

ಭಾರತ ವಿಶ್ವಮಾನ್ಯ ದೇಶ: ಭಾರತವನ್ನು ವಿಶ್ವಮಾನ್ಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕೆಂಬ ಆಶಯದಿಂದಲೇ ಈ ಚುನಾವಣೆ ನಡೆಯುತ್ತಿದ್ದು, ಅತ್ಯಂತ ಮಹತ್ವ ಪಡೆದಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಪ್ರವಾಸ ಮಾಡಲಿಲ್ಲ ಎಂಬ ಆರೋಪ ಎಲ್ಲೆಡೆ ಸದ್ದು ಮಾಡುತ್ತಿದೆ. ಶೋಭಾ ಕರಂದ್ಲಾಜೆ ದೇಶದ ಅಭಿವೃದ್ಧಿಗಾಗಿ ಪ್ರವಾಸ ಮಾಡಿದ್ದಾರೆ. ಹಿಂದು ಕಾರ್ಯಕರ್ತರ ಹತ್ಯೆ ನಡೆದಾಗ ಹೊರಾಟ ನಡೆಸಿ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಇದರ ಬದಲಾಗಿ ರಿಯಲ್ ಎಸ್ಟೆಟ್ ಅಥವಾ ತಮ್ಮ ಸ್ವಂತ ವ್ಯವಹಾರ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದರು.

ಕಾರ್ಯಕರ್ತನಿಂದಾಗಿ ಮುಜುಗರ: ಲಿಂಗದಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿಲ್ಲ. ಕಾರ್ಯಕರ್ತರ ಜತೆ ಸ್ಪಂದಿಸಿಲ್ಲ ಎಂದು ಆಪಾದಿಸಿ ಮುಜುಗರ ಉಂಟಾಗುವಂತೆ ಮಾಡಿದರು. ಈ ವೇಳೆ ಶಾಸಕ ಡಿ.ಎಸ್.ಸುರೇಶ್ ಮಧ್ಯಪ್ರವೇಶಿಸಿ ವಿಪಕ್ಷದವರ ಬದಲಿಗೆ ನಾವೇ ಗೊಂದಲ ಸೃಷ್ಟಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಂಸದರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಪಕ್ಷ ಸಂಘಟನೆ ಇನ್ನಿತರೆ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.

Leave a Reply

Your email address will not be published. Required fields are marked *