ಭಯೋತ್ಪಾದನೆ ಹಿಂದಿರುವವವರು, ಯೋಧರ ಮೇಲೆ ದಾಳಿ ಮಾಡಿದವರಿಗೆ ಖಂಡಿತ ಶಿಕ್ಷೆಯಾಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಭಯೋತ್ಪಾದನಾ ಚಟುವಟಿಕೆ ಹಿಂದಿರುವ ಶಕ್ತಿಗಳು ಹಾಗೂ ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ಮಾಡಿದವರು ಖಂಡಿತವಾಗಿಯೂ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವೈರಿ ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಶುಕ್ರವಾರ ವಂದೇ ಭಾರತ್​ ಎಕ್ಸ್​ಪ್ರೆಸ್​​​ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಯೋಧರ ದಿಟ್ಟತನದ ಮೇಲೆ ನಮಗೆ ನಂಬಿಕೆ ಇದೆ ಎಂದು ಹೇಳಿದರು.

ವಿಶ್ವದಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿರುವ ನಮ್ಮ ನೆರೆಯ ರಾಷ್ಟ್ರ ತನ್ನ ತಂತ್ರ ಮತ್ತು ಕುತಂತ್ರಗಳಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಯೋಚಿಸಿದರೆ ಅದು ತಪ್ಪು. ಎಂದು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕ್​ ವಿರುದ್ಧ ವಾಗ್ದಾಳಿ ನಡೆಸಿದರು.

ಯೋಧರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿ, ದೇಶಕ್ಕೆ ಬೆಂಬಲ ನೀಡಿದ ಎಲ್ಲ ರಾಷ್ಟ್ರಗಳಿಗೂ ಪ್ರಧಾನಿ ಧನ್ಯವಾದಗಳನ್ನು ತಿಳಿಸಿದರು.

ಪಾಕಿಸ್ತಾನದ ಕೈವಾಡ ಇದೆ
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಭದ್ರತಾ ಸಭೆಯ ಬಳಿಕ ಮಾತನಾಡಿದ ವಿತ್ತಸಚಿವ ಅರುಣ್ ಜೇಟ್ಲಿ, ಪುಲ್ವಾಮಾದಲ್ಲಿ ನಡೆದ ಉಗ್ರರ ಮೇಲಿನ ದಾಳಿಯ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಭದ್ರತಾ ಸಭೆಯಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿದೆವು, ಹುತಾತ್ಮ ಯೋಧರ ಕುಟುಂಬಕ್ಕೆ ನಮ್ಮ ಸಂತಾಪ ಇದೆ. ಪಾರ್ಥಿವ ಶರೀರವನ್ನು ಅವರವರ ಕುಟುಂಬಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ದಾಳಿಯ ಹಿಂದೆ ನೆರೆ ರಾಷ್ಟ್ರ ಪಾಕಿಸ್ತಾನದ ಕೈವಾಡ ಇದೆ. ಪಾಕ್ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೆ, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ನೀಡುವವರು ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)