ಗೋಹತ್ಯೆ ನಿಷೇಧಕ್ಕೆ ಒತ್ತಾಯ

ಮೈಸೂರು: ಗೋಹತ್ಯೆ ನಿಷೇಧ ಹಾಗೂ ದೇಶಿ ಗೋ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಒತ್ತಾಯಿಸಿ ಭಾರತೀಯ ಗೋ ಪರಿವಾರ ಜಿಲ್ಲೆಯಲ್ಲಿ ಸಂಗ್ರಹಿಸಿದ ಒಟ್ಟು 80 ಸಾವಿರ ಹಕ್ಕೊತ್ತಾಯ ಪತ್ರಗಳನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಮೂಲಕ ಶನಿವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಗೋವುಗಳ ಸಂರಕ್ಷಣೆಗೆ ಜಿಲ್ಲೆಯಲ್ಲಿ 2017ರಲ್ಲಿ ಪ್ರಾರಂಭವಾದ ಸಹಿ ಸಂಗ್ರಹ ಅಭಿಯಾನದಲ್ಲಿ ಇದುವರೆಗೆ ಒಟ್ಟು 1,30,000 ಜನರು ಹಕ್ಕೊತ್ತಾಯದ ಪತ್ರಕ್ಕೆ ಸಹಿ ಹಾಕಿದ್ದಾರೆ. ಈಗಾಗಲೇ 50 ಸಾವಿರ ಹಕ್ಕೊತ್ತಾಯದ ಪತ್ರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಶನಿವಾರ 80 ಸಾವಿರ ಪತ್ರಗಳನ್ನು 16 ಬಾಕ್ಸ್‌ನಲ್ಲಿ ತುಂಬಿ ಕಳುಹಿಸಲಾಗಿದೆ.

ರಾಜ್ಯದಲ್ಲಿ ಒಂದು ಕೋಟಿ ಜನರು ಗೋ ಸಂರಕ್ಷಣೆ ಪರವಾಗಿ ಸಹಿ ಹಾಕಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಗೋ ಸಂರಕ್ಷಣೆಗೆ ಹಕ್ಕೊತ್ತಾಯ ಮಾಡಿರುವುದು ಇದೇ ಮೊದಲು. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತೀಯ ಗೋ ಪರಿವಾರದ ಜಿಲ್ಲಾ ಕಾರ್ಯದರ್ಶಿ ರಾಕೇಶ್ ಭಟ್ ಒತ್ತಾಯಿಸಿದರು.

ಈ ಸಂದರ್ಭ ಸಂಸ್ಥೆಯ ಪದಾಧಿಕಾರಿಗಳಾದ ಮಾಲಿನಿ, ಉಮಾಶಂಕರ್, ಹರಿಣಿ, ಹರೀಶ್ ಅಂಕಿತ್, ಸಂದೇಶ್ ಪವಾರ್, ಮೈ.ಕಾ. ಪ್ರೇಮ್‌ಕುಮಾರ್, ಕುಮಾರಗೌಡ, ಸಂಜಯ್ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *