ಅಶ್ಲೀಲ ವೀಡಿಯೊಗಳನ್ನು ತೋರಿಸಿ, ಆರು ತಿಂಗಳು ರೇಪ್​ ಮಾಡಿದ: ಭೋಪಾಲ್​ ಹಾಸ್ಟೆಲ್​ ಸಂತ್ರಸ್ತೆ

ಭೋಪಾಲ್​: ನನ್ನನ್ನು ಗೃಹಬಂಧನದಲ್ಲಿರಿಸಿ, ಅಶ್ಲೀಲ ಫಿಲಂಗಳನ್ನು ಬಲವಂತವಾಗಿ ತೋರಿಸುತ್ತಿದ್ದ. ಸತತ ಆರು ತಿಂಗಳು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಖಾಸಗಿ ಹಾಸ್ಟೆಲ್​ವೊಂದರ ನಾಲ್ಕನೇ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ವಾರವಷ್ಟೆ 20 ವರ್ಷದ ವಿಕಲಾಂಗ ಯುವತಿ ಭೂಪಾಲ್​ ಖಾಸಗಿ ಹಾಸ್ಟೆಲ್​ನಲ್ಲಿ ನಡೆಯುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಕುರಿತು ನಿರ್ದೇಶಕ ಅಶ್ವಿನಿ ಶರ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಪ್ರಕರಣದ ಕುರಿತು ದೂರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ನಾಲ್ಕನೇ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದಾರೆ.

ಹಾಸ್ಟೆಲ್​ನಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಮೂವರು ಮಹಿಳೆಯರು ದೂರು ನೀಡಿದ್ದ ಹಿನ್ನೆಲೆ, ಪೊಲೀಸರು ಬುಧವಾರ ಅತ್ಯಾಚಾರ, ಬೆದರಿಕೆ, ಅಕ್ರಮ ಬಂಧನ, ದಲಿತರ ಮೇಲಿನ ದೌರ್ಜನ್ಯದ ಅಡಿ ಅಶ್ವಿನಿ ಶರ್ಮನನ್ನು ಬಂಧಿಸಿದ್ದರು.

ಬಿಹಾರದ ಮುಜಫರ್​ಪುರದ ಶೆಲ್ಟರ್​ ಹೌಸ್​ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್​ ಠಾಕೂರ್ ಹಾಗೂ ಈತನಿಗೆ ಯಾವುದೇ ವ್ಯತ್ಯಾಸ ಇಲ್ಲ. ಹಾಸ್ಟೆಲ್​ ನಿರ್ದೇಶಕನಿಗೆ ಪ್ರಮುಖ ಬಿಜೆಪಿ ನಾಯಕರ ಜತೆ ಹತ್ತಿರದ ನಂಟಿದೆ ಎಂದು ಕಾಂಗ್ರೆಸ್​ ಆಪಾದಿಸಿದೆ.

ಪ್ರಕರಣದ ಕುರಿತು ರಾಜ್ಯ ಕಾಂಗ್ರೆಸ್​ ವಕ್ತಾರರಾದ ಶೋಭಾ ಓಝಾ ಮಾತನಾಡಿದ್ದು, ಅಶ್ವಿನಿ ಶರ್ಮ ಆರ್​ಎಸ್​ಎಸ್​ ಕಾರ್ಯಕರ್ತ. ಈತ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​ರ ಆಶೀರ್ವಾದ ಪಡೆದಿದ್ದಾನೆ ಎಂದು ಆಪಾದಿಸಿ ಆರೋಪಿ ಹಾಗೂ ಶೀವರಾಜ್​ ಚೌಹಾಣ್​ ಒಟ್ಟಿಗಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಪ್ರಕರಣದ ನಂತರ ಎಚ್ಚೆತ್ತುಗೊಂಡಿರುವ ರಾಜ್ಯ ಸರ್ಕಾರ ಎಲ್ಲ ಮಹಿಳಾ ಹಾಸ್ಟೆಲ್​ಗಳನ್ನು ತಿಂಗಳಿಗೊಮ್ಮೆ ಪರಿಶೀಲಿಸುವಂತೆ ಆದೇಶ ಹೊರಡಿಸಿದೆ. (ಏಜೆನ್ಸೀಸ್​)