ಹೊನ್ನಾವರ: ತಾಲೂಕಿನ ಮಂಕಿ ಮಾವಿನಕಟ್ಟೆಯಿಂದ ಮಂಕಿ ಆಸ್ಪತ್ರೆಯವರೆಗೆ ಕಳಪೆಯಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸರಿಪಡಿಸಿ, ಸರ್ವಿಸ್ ರಸ್ತೆ, ಡಿವೈಡರ್ ದೀಪ ಅಳವಡಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಯ ಪ್ರಮುಖರು ಮಂಗಳವಾರ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಕಿ ಪಪಂ ಆವರಣದಲ್ಲಿ ಡಾ. ಪುನೀತ್ ರಾಜಕುಮಾರ ಪುಣ್ಯತಿಥಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಿವಿಧ ಸಂಘಟನೆಯ ಪ್ರಮುಖರು, ಪಪಂ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿಯಿಂದಾಗಿರುವ ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ವರ್ಷಗಳಿಂದ ಮಂಕಿ ಮಾವಿನಕಟ್ಟೆಯಲ್ಲಿ ಸರ್ವಿಸ್ ರಸ್ತೆ, ಮಂಕಿ ಆಸ್ಪತ್ರೆ ಬಳಿ ಸರ್ವಿಸ್ ರಸ್ತೆ ಮತ್ತು ಡಿವೈಡರ್ ಲೈಟ್ ಅಳವಡಿಸಲು ಐಆರ್ಬಿ ಕಂಪನಿಯ ನಿರ್ಲಕ್ಷ್ಯ ಧೋರಣೆಯ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ, ತಾಲೂಕಾಡಳಿತ, ಎನ್ಎಚ್ಎಐ ಬೇಡಿಕೆ ಈಡೇರಿಸಲು ವಿಫಲವಾಗಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮಂಕಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿ ರಸ್ತೆ ಸಂಚಾರ ತಡೆದು ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕರ್ನಾಟಕ ಕ್ರಾಂತಿರಂಗ ಸಂಘಟನೆ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಕೆಆರ್ಎಸ್ ಪಕ್ಷದ ಮುಖಂಡ ನೀಲಕಂಠ ನಾಯ್ಕ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಾನುಜ ಅಯ್ಯಂಗಾರ್, ಉಪಾಧ್ಯಕ್ಷ ಗಣಪತಿ ನಾಯ್ಕ, ಹರೀಶ ಮೊಗೇರ, ವಿವಿಧ ಸಂಘಟನೆಯ ಪ್ರಮುಖರಾದ ಈಶ್ವರ ಗೌಡ, ರಾಜೇಶ ನಾಯ್ಕ, ಸತೀಶ ನಾಯ್ಕ, ಇತರರಿದ್ದರು.