ಕೊಳ್ಳೇಗಾಲ: ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟ ಕೊಳ್ಳೇಗಾಲ ಹಾಗೂ ಹನೂರು ತಾಲೂಕು ಪದಾಧಿಕಾರಿಗಳು ಪಟ್ಟಣದಿಂದ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿರವರೆಗೆ ಸೋಮವಾರ ಬೃಹತ್ ಬೈಕ್ ರ‌್ಯಾಲಿ ನಡೆಸಿದರು.
ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪ್ರತಿಭಟನಾಕಾರರು ಮಾಲಾರ್ಪಣೆ ಮಾಡಿ, ಬಳಿಕ ಪ್ರಮುಖ ರಸ್ತೆಗಳಲ್ಲಿ ಚಾಮರಾಜನಗರ ಕಡೆಗೆ ಸಾಗಿದರು.
ವಕೀಲ ರಾಜೇಂದ್ರ ಮಾತನಾಡಿ, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗಾಗಿ ಬೈಕ್ ರ‌್ಯಾಲಿ ಹಮ್ಮಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಬೇಕು. ಸಿಎಂ ಸಿದ್ದರಾಮಯ್ಯ ಅವರು ಯಾವುದೇ ನೆಪ ಹೇಳಬಾರದು. 3 ವರ್ಷಗಳ ಹೋರಾಟಕ್ಕೆ ಸ್ಪಂದಿಸಬೇಕು. ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು. ಸದಾಶಿವ ಆಯೋಗವನ್ನು ಅಂಗೀಕರಿಸಬೇಕು. ಇತ್ತೀಚೆಗೆ ಮುಖ್ಯಮಂತ್ರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ 34,863 ಹುದ್ದೆಗಳನ್ನು ತುಂಬಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ನೀಡಲು ಕೋರ್ಟ್ ಪರಮಾಧಿಕಾರ ನೀಡಿದೆ. ಆದ್ದರಿಂದ ಒಳ ಮೀಸಲಾತಿ ಅಂಗೀಕರ ಆಗುವವರೆಗೂ ಯಾವುದೇ ಹುದ್ದೆಯನ್ನು ಭರ್ತಿ ಮಾಡಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಬಸವರಾಜು (ದ್ವಾರ್ಕಿ), ಮುಖಂಡರಾದ ಶಿವಮಲ್ಲು, ಎಸ್.ರಾಚಪ್ಪ, ಹನುಮಂತ್ ರಾಜ್, ಸಿ.ಮಾದು, ಸೋಮಣ್ಣ, ಮಾದೇಶ್, ಲಿಂಗರಾಜು, ಸುರೇಶ್, ಶಂಕರ್, ದೇಮನಹಳ್ಳಿ ಮನು, ನಾರಾಯಣಿ ಇತರರು ಇದ್ದರು.