More

    ಶವ ಸಿಕ್ಕ ಕೆರೆ ಖಾಲಿ ಮಾಡಲು ಪಟ್ಟು

    ಹುಬ್ಬಳ್ಳ: ತಾಲೂಕಿನ ಉಮಚಗಿ ಗ್ರಾಮದಲ್ಲಿರುವ ಸಣ್ಣ ಕೆರೆಯಲ್ಲಿ ವ್ಯಕ್ತಿಯೊಬ್ಬರು 20 ದಿನಗಳ ಹಿಂದೆ ಬಿದ್ದು ಮೃತಪಟ್ಟಿದ್ದು, ಸಮೂಹ ಸನ್ನಿಗೊಳಗಾಗಿರುವ ಜನರು ನೀರು ಕುಡಿಯುವುದನ್ನೇ ಬಿಟ್ಟಿದ್ದಾರೆ. ಹನಿ ನೀರಿಗಾಗಿ ದೂರದ ಊರಿಗೆ ಟ್ರಾೃಕ್ಟರ್, ಚಕ್ಕಡಿ ಸಮೇತ ತೆರಳುತ್ತಿದ್ದಾರೆ.


    ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಎರಡು ದೊಡ್ಡ ಮತ್ತು ಸಣ್ಣ ಕೆರೆಗಳಿವೆ. ಸಣ್ಣ ಕೆರೆಯ ನೀರನ್ನೇ ಜನರು ಮೊದಲಿನಿಂದಲೂ ಕುಡಿಯಲು ನೆಚ್ಚಿದ್ದಾರೆ.

    ಸಣ್ಣ ಕೆರೆಯಲ್ಲಿ ನೀರು ಖಾಲಿಯಾದಾಗ ದೊಡ್ಡ ಕೆರೆಯ ನೀರನ್ನು ಸಣ್ಣ ಕೆರೆಗೆ ಹರಿಬಿಟ್ಟುಕೊಳ್ಳುತ್ತಾರೆ. ಎರಡು ಕೆರೆಗಳ ಮಧ್ಯೆ 20 ಅಡಿಯಷ್ಟು ಅಂತರವಿದೆ.


    ಮೇ ಮೊದಲ ವಾರದಲ್ಲಿ ವ್ಯಕ್ತಿಯೊಬ್ಬರು ಸಣ್ಣ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಇದು ಗ್ರಾಮಸ್ಥರಿಗೆ ಗೊತ್ತಾಗಿರಲಿಲ್ಲ. ನಾಲ್ಕು ದಿನಗಳ ನಂತರ ಶವ ಕೆರೆಯಲ್ಲಿ ಪತ್ತೆಯಾಗಿದೆ.

    ಅದೇ ನೀರು ಕುಡಿಯುತ್ತಿದ್ದ ಜನರು ಈಗ ಈ ಕೆರೆಯ ನೀರನ್ನೇ ಬಳಸುವುದನ್ನು ಬಿಟ್ಟಿದ್ದಾರೆ. ಕೊಡ್ಲಿವಾಡ, ನೆಲವಡಿ ಗ್ರಾಮಗಳಿಗೆ ಟ್ರಾೃಕ್ಟರ್, ಟ್ಯಾಂಕರ್, ಚಕ್ಕಡಿ ಸಮೇತ ತೆರಳಿ ನೀರು ತರುತ್ತಿದ್ದಾರೆ. ಗ್ರಾಮದಲ್ಲಿರುವ ಬೋರ್‌ವೆಲ್ ಸವಳು ನೀರಿನಿಂದ ಕೂಡಿದೆ. ಕುಡಿಯಲು ಅಯೋಗ್ಯವಾಗಿದ್ದರಿಂದ ಜಾನುವಾರುಗಳಿಗೆ ಬಳಸುತ್ತಿದ್ದಾರೆ.


    ಈಗಾಗಲೇ ಎರಡೂ ಕೆರೆಗಳ ನೀರನ್ನು ಪರೀಕ್ಷೆಗೊಳಪಡಿಸಲಾಗಿದೆ. ಯಾವುದೇ ಬ್ಯಾಕ್ಟೀರಿಯಾ ಕಂಡುಬಂದಿಲ್ಲ. ಜನರ ಒತ್ತಾಯದ ಮೇರೆಗೆ ಸಣ್ಣ ಕೆರೆಯ ನೀರನ್ನು ಹೊರಗಡೆ ಬಿಡಲಾಗಿದೆ. ದೊಡ್ಡ ಕೆರೆಯ ನೀರನ್ನೂ ಹೊರಗಡೆ ಬಿಟ್ಟು, ಕೆರೆ ಖಾಲಿ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಜನರಿಗೆ ತಿಳಿವಳಿಕೆ ನೀಡಿದರೂ ಕೇಳುತ್ತಿಲ್ಲ ಎನ್ನುತ್ತಾರೆ ಪಿಡಿಒ.


    ಆತಂಕದ ವಾತಾವರಣ

    ಕಳೆದ ವರ್ಷ ಮಳೆಯಾಗಿದ್ದರಿಂದ ಎರಡೂ ಕೆರೆಗಳು ಭರ್ತಿಯಾಗಿದ್ದವು. 4 ವರ್ಷ ಚಿಂತೆ ಇಲ್ಲ ಎಂದೇ ಗ್ರಾಮಸ್ಥರು ಭಾವಿಸಿದ್ದರು. ಆದರೆ ಕೆರೆಯಲ್ಲಿ ಶವ ಪತ್ತೆಯಾದ ನಂತರ ಜನರಿಗೆ ಭಯ ಶುರುವಾಗಿದೆ. ಒಂದು ವೇಳೆ ಮಳೆಯಾಗದೆ ಹೋದರೆ ನೀರಿಗಾಗಿ ಮತ್ತಷ್ಟು ಹಾಹಾಕಾರ ಶುರುವಾಗಬಹುದು ಎಂಬ ಆತಂಕವಿದೆ. ಆದರೂ ಎರಡೂ ಕೆರೆಯ ನೀರು ಖಾಲಿ ಮಾಡುತ್ತಿರುವುದು ಏಕೆ ಎಂದು ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಎರಡೂ ಕೆರೆಯ ನೀರು ಖಾಲಿ ಮಾಡಬೇಕು. ಮಳೆ ಬಂದಾಗ ಎರಡೂ ಕೆರೆಗಳು ಭರ್ತಿಯಾಗುತ್ತವೆ. ನಮಗಿರುವ ಆತಂಕವೂ ದೂರವಾಗುತ್ತದೆ ಎನ್ನುತ್ತಿದ್ದಾರೆ ಗ್ರಾಮಸ್ಥರಾದ ಪ್ರಹ್ಲಾದ ಹುಲ್ಲೂರು, ನಿಂಗಪ್ಪ ಮುಗಳಿ, ತಿಪ್ಪಣ್ಣ ಹೊರಕೇರಿ, ನಾಗಪ್ಪ ಹರವಿ ಇತರರು.


    ಸಣ್ಣ ಕೆರೆಯ ನೀರು ಖಾಲಿ ಮಾಡಿದ್ದೇವೆ. ದೊಡ್ಡ ಕೆರೆಯ ನೀರು ಖಾಲಿ ಮಾಡುವುದು ಬೇಡ ಎಂದಿದ್ದೇವೆ. ಜನರು ಕೇಳುತ್ತಿಲ್ಲ. ಮಳೆಗಾಲ ಹೋದರೆ ಗ್ರಾಮದಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಎದುರಾಗಬಹುದು. ಅಲ್ಲದೆ ಆ ಕೆರೆಯಲ್ಲಿ ವ್ಯಕ್ತಿ ಮೃತಪಟ್ಟಿಲ್ಲ. ಜನರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತಿದೆ.
    — ಲಲಿತಾ ವಡ್ಡರ್, ಮಲ್ಲಿಗವಾಡ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts