ಬೇಲೂರು: ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಕಾಡಾನೆಯೊಂದು ವಾಸದ ಮನೆಗಳ ಆಸುಪಾಸಿನಲ್ಲೇ ಓಡಾಡುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ್ದು, ಅಧಿಕಾರಿಗಳು ಆನೆಯನ್ನು ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಮಲೆನಾಡು ಭಾಗದ ಅರೇಹಳ್ಳಿ, ಬಿಕ್ಕೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳ ಹೇಳ ತೀರದಾಗಿದೆ. ಜತೆಗೆ ಆಹಾರ ಅರಸಿ ಗ್ರಾಮಗಳತ್ತಲೇ ದಾಂಗುಡಿ ಇಡುತ್ತಿರುವ ಆನೆಗಳಿಂದಾಗಿ ಜನರು ಭಯದಲ್ಲೆ ವಾಸಿಸುವಂತಾಗಿದೆ. ಜತೆಗೆ ಗುಂಪಿನಿಂದ ಬೇರಾಗಿರುವ ಸಲಗವೊಂದು ಬೆಳಗ್ಗೆ ಅರೇಹಳ್ಳಿ ಹೋಬಳಿಯ ಬೆಳ್ಳಾವರ ಗ್ರಾಮದ ಮನೆಯ ಪಕ್ಕದಲ್ಲಿ ಬಂದು ಆಹಾರ ಹುಡುಕಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮಾತ್ರವಲ್ಲದೆ ಈ ಕಾಡಾನೆ ಒಂಟಿಯಾಗಿ ಮನೆ ಸೇರಿದಂತೆ ಸಮೀಪದಲ್ಲೇ ಓಡಾಡುವುದನ್ನು ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವುದು ಗಾಬರಿ ಹುಟ್ಟಿಸುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಇಷ್ಟೇ ಅಲ್ಲದೆ ಕಳೆದ ಎರಡು ತಿಂಗಳಿಂದ ಇಲ್ಲಿಯವರೆಗೂ ಕಾಡಾನೆಗಳ ದಾಳಿಗೆ ಸಿಲುಕಿ ಗಾಯಗೊಂಡವರ ಸಂಖ್ಯೆ ಸಾಕಷ್ಟಿದೆ. ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೇ ಕಾಡಾನೆಗಳು ಮತ್ತೆ ಗ್ರಾಮಗಳ ಬಳಿ ಪ್ರಾತ್ಯಕ್ಷವಾಗುವುದು, ಜನರನ್ನು ಅಟ್ಟಾಡಿಸುವುದು ಸಾಮಾನ್ಯವಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರೋಸಿ ಹೋದ ಜನರು: ಬೇಲೂರು ತಾಲೂಕಿನ ಅರೇಹಳ್ಳಿ-ಬಿಕ್ಕೋಡು ಹೋಬಳಿ ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಕಾಡಾನೆಗಳ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಕಳೆದ ಐದು ತಿಂಗಳಿಂದ ಇಲ್ಲಿವರೆಗೂ ಬಿಕ್ಕೋಡು ಹೋಬಳಿಯೊಂದರಲ್ಲೆ 55ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮತ್ತು ಪ್ರಾಣಹಾನಿ ಜತೆಗೆ ಕೂಲಿ ಕಾರ್ಮಿಕರನ್ನು ಗಂಬೀರವಾಗಿ ಗಾಯಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಅವಘಡ ಸಂಭವಿಸುವ ಮುನ್ನವೇ ಸರ್ಕಾರ ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಓಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.