More

  ಹೊಸ ಮದ್ಯದಂಗಡಿಗೆ ಅವಕಾಶ ನೀಡದಂತೆ ಒತ್ತಾಯ

  ಬಳ್ಳಾರಿ : ರಾಜ್ಯ ಸರ್ಕಾರ ಸಾವಿರಕ್ಕೂ ಹೆಚ್ಚು ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಎಐಎಂಎಸ್‌ಎಸ್,ಎಐಡಿವೈಒ ಹಾಗೂ ಎಐಕೆಕೆಎಂಎಸ್ ಸಂಘಟನೆ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

  ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಈಶ್ವರಿ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಅಬಕಾರಿ ಇಲಾಖೆಯ ನಿರ್ಧಾರವು ಸಮಾಜಘಾತುಕವಾದುದು. ಈಗಾಗಲೇ ಮದ್ಯಪಾನದ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ನೈತಿಕ ಮೌಲ್ಯ ಕುಸಿಯುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳ ಹೆಚ್ಚಳಕ್ಕೆ ಮದ್ಯಪಾನವೂ ಒಂದು ಮುಖ್ಯ ಕಾರಣ ಎಂದು ವರದಿಗಳು ಸಾಬೀತುಪಡಿಸುತ್ತಲೇ ಇವೆ. ಕೌಟುಂಬಿಕ ದೌರ್ಜನ್ಯಗಳಂತೂ ಇನ್ನೂ ಕ್ರೂರರೂಪ ಪಡೆದುಕೊಳ್ಳುತ್ತಿವೆ. ಹೆಣ್ಣು ಮಕ್ಕಳು ಬೆವರು ಸುರಿಸಿ ದುಡಿದ ಹಣವನ್ನು ಗಂಡಂದಿರು ಕುಡಿತಕ್ಕಾಗಿ ಹೊಡೆದು ಬಡಿದು ಕಸಿದುಕೊಳ್ಳುವುದು ಈಗಲೂ ಮನೆ ಮನೆಯ ಕಥೆಯಾಗಿದೆ. ಇದರಿಂದಾಗಿ ಎಷ್ಟೋ ಹೆಣ್ಣುಮಕ್ಕಳು ತಮಗೂ ತಮ್ಮ ಮಕ್ಕಳಿಗೂ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಉಪವಾಸ ಮಲಗುವಂತಾಗುತ್ತಿದೆ ಎಂದರು.

  ಮಹಿಳೆಯರ ಸಬಲೀಕರಣ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿರುವ ರಾಜ್ಯ ಸರ್ಕಾರ ಈಗ ಅದೇ ಮಹಿಳೆಯರ ಮೇಲೆ ಕ್ರೂರ ಅಪರಾಧಗಳಿಗೆ ಕಾರಣವಾಗುತ್ತಿದೆ. ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಮಹಿಳಾ ಸಮುದಾಯ ಕೇಳಿಕೊಳ್ಳುತ್ತಿದ್ದರೆ ಸರ್ಕಾರ ಮಾತ್ರ ಇನ್ನೂ ಹೆಚ್ಚು ಪರವಾನಗಿ ಕೊಡುತ್ತಿದೆ. ಇದು ಯಾವುದೇ ಸರ್ಕಾರಗಳ ನೈಜ ಮುಖವಾಡ ಎಂದು ಮಹಿಳಾ ಸಮುದಾಯ ಅರ್ಥ ಮಾಡಿಕೊಂಡು ಒಕ್ಕೊರಲಿನಿಂದ ಮಹಿಳೆಯರು ಬೀದಿಗಿಳಿಯಬೇಕು ಎಂದು ತಿಳಿಸಿದರು.

  ಎಐಡಿವೈಒ ಜಿಲ್ಲಾಧ್ಯಕ್ಷ ಎ.ಪಂಪಾಪತಿ ಮಾತನಾಡಿ, ಹಲವಾರು ಸಮಾಜಘಾತುಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುತ್ತಿದೆ. ಇದೇ ಕುಡಿತದಿಂದ ಎಷ್ಟೋ ಎಳೆಯ ಜೀವಗಳು ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕುಡಿತದ ಚಟಕ್ಕೆ ಬಲಿಯಾಗಿ ಮೌಲ್ಯಯುತ ಜೀವನ ನಡೆಸಬೇಕಾದ ಗಂಡು ಮಕ್ಕಳು ಹಾದಿ ತಪ್ಪಿ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಸಣ್ಣ ಮಕ್ಕಳು ಕೂಡ ಕುಡಿಯುವುದನ್ನು ಕಲಿಯುತ್ತಿದ್ದಾರೆ. ಇವೆಲ್ಲವನ್ನು ನಾವು ತೀವ್ರ ಆತಂಕದಿಂದ ಗಮನಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಾಜದ ನೈತಿಕ ಸ್ವಾಸ್ಥ್ಯವನ್ನು ಉಳಿಸಿ-ಬೆಳೆಸುವುದನ್ನು ಬಿಟ್ಟು, ಜನಸಾಮಾನ್ಯರ ನೈತಿಕ ಬೆನ್ನೆಲುಬನ್ನು ಮುರಿಯಲು ಕಾರಣವಾಗುವ ಮದ್ಯಪಾನವನ್ನು ಸರ್ಕಾರ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಖೇದಕರ ಎಂದು ಹೇಳಿದರು .

  ಎಐಕೆಕೆಎಂಎಸ್‌ನ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಜನರ ಆರ್ಥಿಕತೆಯ ಸಬಲೀಕರಣಕ್ಕೆ ಕೆಲವು ಗ್ಯಾರಂಟಿಗಳನ್ನು ಘೋಷಿಸಿರುವ ಸರ್ಕಾರವು, ಸಾಮಾಜದ ಸ್ವಾಸ್ಥ್ಯದ ಗ್ಯಾರಂಟಿಯನ್ನು ಖಾತ್ರಿಪಡಿಸಲು ಪ್ರತಿ ಹಳ್ಳಿ, ತಾಲೂಕು, ಜಿಲ್ಲೆಗಳಲ್ಲಿ ಕುಡಿಯುವ ನೀರು, ವಿದ್ಯುತ್ – ಸಾರಿಗೆ ಸಂಪರ್ಕ, ಶಾಲೆ-ಕಾಲೇಜು ಮತ್ತು ಆಸ್ಪತ್ರೆಗಳ ನಿರ್ಮಾಣ ಮಾಡಬೇಕು. ಸರ್ಕಾರ ಆದಾಯದ ಕೊರತೆ ನೀಗಿಸಲು ಶ್ರೀಮಂತ ಕೈಗಾರಿಕೋದ್ಯಮಿಗಳ ಮೇಲೆ ಹೆಚ್ಚು ತೆರಿಗೆ ಹಾಕಬೇಕೇ ವಿನಹ ಸಾಮಾನ್ಯ ಜನತೆಯನ್ನು ಮದ್ಯದ ಚಟಕ್ಕೆ ದೂಡಿ, ಅವರ ಜೀವನವನ್ನು ನರಕ ಸದೃಶ ಮಾಡುವುದಲ್ಲ. ಇಡೀ ಸಮಾಜವನ್ನು ಅಧಃಪತನಕ್ಕೆ ತಳ್ಳುವ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.

  ಎಐಎಂಎಸ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಸಂಘಟನೆಯ ಪದಾಧಿಕಾರಿಗಳಾದ ಜಗದೀಶ್, ರಾಜ ,ವಿದ್ಯಾ, ಗಿರಿಜಾ, ನಿಂಗರಾಜ್ ಇನ್ನಿತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts