ಬಲವಂತದ ಮುಷ್ಕರ

ಬೆಂಗಳೂರು: ಜನರ ನೀರಸ ಪ್ರತಿಕ್ರಿಯೆಯಿಂದಾಗಿ ಮೊದಲ ದಿನವೇ ವಿಫಲಗೊಂಡಿದ್ದ ದೇಶವ್ಯಾಪಿ ಮುಷ್ಕರದ 2ನೇ ದಿನವಾದ ಬುಧವಾರ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಬಲವಂತದ ಬಂದ್ ಮಾಡಿಸಲಾಯಿತು. ಬೆಳಗ್ಗೆ ಬಹುತೇಕ ಕಡೆ ಪರಿಸ್ಥಿತಿ ಸಹಜವಾಗಿತ್ತಾದರೂ ಹೊತ್ತು ಕಳೆದಂತೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಯಿತು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಪ್ರಯಾಣಿಕರು ಮನೆಗೆ ತೆರಳಲು ಹರಸಾಹಸಪಟ್ಟರು. ಮತ್ತೊಂದೆಡೆ ಬೆಂಗಳೂರಿನ ಹಲವೆಡೆ ಸಂಘಟನೆಗಳ ಕೆಲವು ಮುಖಂಡರೇ ಖುದ್ದು ನಿಂತು ಗಾರ್ವೆಂಟ್ಸ್ ಹಾಗೂ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಇದರಿಂದಾಗಿ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದಿದ್ದರಿಂದಾಗಿ ಕೆಲವೊಂದು ಸಣ್ಣಪುಟ್ಟ ಘಟನೆ ಬಿಟ್ಟರೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ರಾಜ್ಯದಲ್ಲಿ ಏನೇನಾಯ್ತು?

  • ರಾಜ್ಯದಲ್ಲಿ 2ನೇ ದಿನದ ಮುಷ್ಕರಕ್ಕೂ ನೀರಸ ಪ್ರತಿಕ್ರಿಯೆ
  • ಜನಜೀವನಕ್ಕೆ ತಟ್ಟದ ಪ್ರತಿಭಟನೆ ಬಿಸಿ
  • ಬೆಂಗಳೂರಲ್ಲಿ ಮಧ್ಯಾಹ್ನ 1 ಗಂಟೆವರೆಗೆ 3ಸಾವಿರ ಬಿಎಂಟಿಸಿ ಬಸ್​ಗಳ ಸಂಚಾರ ಸ್ಥಗಿತ
  • ಕೆಎಸ್ಸಾರ್ಟಿಸಿ, ಆಟೋ, ಟ್ಯಾಕ್ಸಿ ಸಂಚಾರ ಸುಗಮ
  • ಬಸ್ ಸ್ಥಗಿತವಾಗಿದ್ದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರದಾಟ, ಕೆಲವೆಡೆ ಬಲವಂತದ ಬಂದ್​ನಿಂದಾಗಿ ವ್ಯಾಪಾರಸ್ಥರಿಗೆ ನಷ್ಟ\

ಮುಷ್ಕರ ಪ್ರತಿಭಟನೆಗಷ್ಟೇ ಸೀಮಿತ

ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ ಕರೆಕೊಟ್ಟಿದ್ದ ಮುಷ್ಕರ ಎರಡನೇ ದಿನವಾದ ಬುಧವಾರವೂ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಬೆಂಗಳೂರು ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬಲವಂತದ ಮುಷ್ಕರ ನಡೆಸಲಾಯಿತು. ಕೆಲವೆಡೆ ಅಂಗಡಿ-ಮುಂಗಟ್ಟುಗಳನ್ನು ಸಂಘಟನೆಗಳ ಮುಖಂಡರು ಒತ್ತಾಯಪೂರ್ವಕವಾಗಿ ಮುಚ್ಚಿಸಿದರು. ಉಳಿದಂತೆ ಜನಜೀವನ ಎಂದಿನಂತಿತ್ತು. ಕೆಲ ಜಿಲ್ಲೆಗಳಲ್ಲಿ ಹೊರತುಪಡಿಸಿ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.

ಬಸ್​ಗಳ ಮೇಲೆ ಕಲ್ಲುತೂರಾಟ: ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಂಚಾರ ಸ್ಥಗಿತಗೊಳಿಸಲಾಯಿತು. ಇಬ್ಬರು ಚಾಲಕರ ಕಣ್ಣಿಗೆ ಗಾಯವಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಕಲ್ಲು ತೂರಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಲಾಯಿತು. ಬಳ್ಳಾರಿಯ ಮೋತಿ ಸರ್ಕಲ್​ನಲ್ಲಿ ಸಿರಗುಪ್ಪ, ಬಳ್ಳಾರಿ ಡಿಪೋಗೆ ಸೇರಿದ ತಲಾ 2 ಬಸ್​ಗಳಿಗೆ ಮಂಗಳವಾರ ರಾತ್ರಿ ದುಷ್ಕರ್ವಿುಗಳು ಕಲ್ಲು ತೂರಿದ್ದಾರೆ. ಬಸ್​ಗಳ ಸಂಚಾರ ವ್ಯತ್ಯಯದಿಂದ ಕೆಎಸ್​ಆರ್​ಟಿಸಿಗೆ 2.42 ಕೋಟಿ ರೂ., ಬಿಎಂಟಿಸಿಗೆ 3 ಕೋಟಿ ರೂ. ಆದಾಯ ಖೋತಾ ಆಗಿದೆ. ಬಸ್​ಗಳಿಗೆ ಕಲ್ಲು ಹೊಡೆದಿದ್ದರಿಂದ ಎರಡೂ ನಿಗಮಗಳಿಗೆ 9.82 ಲಕ್ಷ ರೂ. ನಷ್ಟವಾಗಿದೆ.

ಮುಷ್ಕರದ ವಿರುದ್ಧ ಕಿಡಿಕಾರಿದ ವಿದ್ಯಾರ್ಥಿನಿ

ಮುಷ್ಕರದ ವಿರುದ್ಧ ದಾವಣಗೆರೆ ತಾಲೂಕು ಕುಕ್ಕವಾಡ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಮೋನಿಕಾ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಶಾಲೆಗೆ ಹೊರಟಾಗ ಬಸ್ ಸಿಗದಿದ್ದಕ್ಕೆ ಕಿಡಿಕಾರಿರುವ ಆಕೆ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ವಿಡಿಯೋ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಮುಷ್ಕರ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ತಿಂಗಳಲ್ಲಿ ನಾಲ್ಕು ದಿನ ರಜೆ, ಹಬ್ಬಗಳು ಇರುತ್ತವೆ. ಈ ಮಧ್ಯೆ ಮುಷ್ಕರ ಎಂದು ರಜೆ ಕೊಟ್ಟರೆ ನಾವು ಓದಿಕೊಳ್ಳುವುದು ಹೇಗೆ? ಎಂದು ಆಕ್ರೋಶ ಹೊರಹಾಕಿದ್ದಾಳೆ.

ಚಿನ್ನ ಉತ್ಪಾದನೆ 5 ಕೆ.ಜಿ. ಇಳಿಕೆ

ಮುಷ್ಕರದಿಂದಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ವಿುಕರು ಬುಧವಾರ ಕೆಲಸ ಸ್ಥಗಿತಗೊಳಿಸಿದ್ದರಿಂದ ಚಿನ್ನದ ಉತ್ಪಾದನೆಯಲ್ಲಿ ಅಂದಾಜು 5 ಕೆ.ಜಿ. ಇಳಿಕೆ ಕಂಡಿದೆ. ಇದರಿಂದ ಕಂಪನಿಗೆ 13.5 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರತಿಭಟನಾನಿರತರು ಅಸ್ವಸ್ಥ

ಬಾಗಲಕೋಟೆ, ಚಾಮರಾಜನಗರ, ಕಲಬುರಗಿ, ಗದಗ ಜಿಲ್ಲೆಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 7 ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಒಬ್ಬ ಬಿಸಿಯೂಟ ಸಹಾಯಕಿ ಅಸ್ವಸ್ಥಗೊಂಡಿದ್ದರು.