ಕೆಲಸದಲ್ಲಿ ಮುಂದುವರಿಸಲು ಒತ್ತಾಯ

ಗುಂಡ್ಲುಪೇಟೆ: ತಾಲೂಕಿನ ಸೋಮಹಳ್ಳಿ ಸಮೀಪದ ಮೀರಾ ಸೋಲಾರ್ ಕಂಪನಿಯಲ್ಲಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕಿರುಕುಳ ನೀಡಿ ಕೆಲಸದಿಂದ ತೆಗೆದುಹಾಕಿದ್ದು, ನಮ್ಮನ್ನು ಕೆಲಸದಲ್ಲಿ ಮತ್ತೆ ಮುಂದುವರಿಸಬೇಕು ಎಂದು ಒತ್ತಾಯಿಸಿ 15 ಸ್ಥಳೀಯ ಕಾರ್ಮಿಕರು ಪೊಲೀಸರ ಮೊರೆ ಹೋಗಿದ್ದಾರೆ.

ಒಂದು ವರ್ಷದ ಹಿಂದೆ ಸುಮಾರು 150ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಬೇಕಾದ ಭೂಮಿಯನ್ನು ಕಂಪನಿಯವರು ರೈತರಿಂದ ಖರೀದಿಸಿದ್ದಾರೆ. ಭೂಮಿಯನ್ನು ಮಾರಲು ಒಪ್ಪದ ಕೆಲ ರೈತ ಕುಟುಂಬಗಳಿಗೆ ಕಂಪನಿ ಮಾಲೀಕರು ಉದ್ಯೋಗ ಭರವಸೆ ನೀಡಿ ಭೂಮಿಯನ್ನು ಪಡೆದಿದ್ದರು. ಅದರಂತೆ ಕೆಲವರು ಘಟಕದಲ್ಲಿ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು.

ಆದರೆ, ಇತ್ತೀಚೆಗೆ ಬದಲಾದ ಆಡಳಿತ ಮಂಡಳಿಯವರು ಹಳೆಯ ಸಿಬ್ಬಂದಿಗೆ ಅನಗತ್ಯ ಕಿರುಕುಳ ನೀಡಿ, ಕಳೆದ ತಿಂಗಳಿನಿಂದ ಕೆಲಸಕ್ಕೆ ಬರದಂತೆ ಹೇಳಿ ಸಂಬಳವನ್ನೂ ನೀಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ ಬಿಹಾರ ಮೂಲದ ಕಾರ್ಮಿಕರನ್ನು ಕರೆತಂದು ಕೆಲಸಕ್ಕೆ ನಿಯೋಜಿಸಿದ್ದಾರೆ. ಇದರಿಂದ ನಮ್ಮ ಕುಟುಂಬಗಳು ಬೀದಿಪಾಲಾಗಿವೆ. ಕಂಪನಿಯು ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ ನಮ್ಮನ್ನು ಉದ್ಯೋಗದಲ್ಲಿ ಮುಂದುವರಿಸಲು ನೆರವಾಗಬೇಕು ಎಂದು ಪೊಲೀಸರನ್ನು ಕೋರಿದ್ದಾರೆ.

ಈ ಬಗ್ಗೆ ದೂರು ಸ್ವೀಕರಿಸಿರುವ ಗುಂಡ್ಲುಪೇಟೆ ಪೊಲೀಸರು ಸರ್ಕಲ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ.