ಇದೊಂದು ಪರೀಕ್ಷೆಗಾಗಿ 134 ವಿಮಾನಗಳ ಸಮಯವನ್ನು ಬದಲಿಸಿದರು!

ಸಿಯೋಲ್​: ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದಂತೆ ಪರೀಕ್ಷೆ ಬರೆಯಬೇಕು, ಅವರ ಏಕಾಗ್ರತೆಗೆ ಭಂಗ ಬರಬಾರದು ಎಂದು ದಕ್ಷಿಣ ಕೊರಿಯಾ ಸರ್ಕಾರ 134 ವಿಮಾನಗಳ ಸಮಯವನ್ನು ಬದಲಿಸಿದ್ದು ಸೇರಿದಂತೆ ಹಲವು ಅಸಮಾನ್ಯ ಕ್ರಮಗಳನ್ನು ಕೈಗೊಂಡಿತ್ತು.

ಈ ವರ್ಷ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾಗಿರುವ ರಾಷ್ಟ್ರೀಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಗುರುವಾರ ನಡೆಯಿತು. ಈ ಪರೀಕ್ಷೆಯನ್ನು 5,95,000 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಂತ ವಾತಾವರಣ ಕಲ್ಪಿಸುವ ಸಲುವಾಗಿ ಕೊರಿಯಾ ಸರ್ಕಾರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿತ್ತು. ಅದರಲ್ಲೂ ಮುಖ್ಯವಾಗಿ ಇಂಗ್ಲೀಷ್‌ ಲಿಸನಿಂಗ್​ ಟೆಸ್ಟ್​ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳಲ್ಲಿ ಸುಮಾರು 25 ನಿಮಿಷ ವಿಮಾನದ ಟೇಕ್​ ಆಫ್​ ಮತ್ತು ಲ್ಯಾಂಡಿಂಗ್​ ರದ್ದುಗೊಳಿಸಿದ್ದವು. ಜತೆಗೆ ಆಕಾಶದಲ್ಲಿ ವಿಮಾನ 10,000 ಅಡಿಗಿಂತ ಎತ್ತರದಲ್ಲಿ ಹಾರಾಟ ನಡೆಸಬೇಕು ಎಂದು ಆದೇಶ ಹೊರಡಿಸಲಾಗಿತ್ತು.

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳು ಟ್ರಾಫಿಕ್ ಸಮಸ್ಯೆಯಿಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪುವಂತಾಗಲು ಸರ್ಕಾರಿ ಕಚೇರಿಗಳು, ಪ್ರಮುಖ ಕಂಪನಿಗಳು ಮತ್ತು ಷೇರು ಮಾರುಕಟ್ಟೆಯನ್ನು ಒಂದು ಗಂಟೆ ತಡವಾಗಿ ತೆರೆಯುವಂತೆ ಸೂಚನೆ ನೀಡಲಾಗಿತ್ತು. ಜತೆಗೆ ಟ್ರಾಫಿಕ್​ನಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಪೊಲೀಸ್​ ಕಾರು ಮತ್ತು ಮೋಟಾರ್​ ಬೈಕ್​ಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. (ಏಜೆನ್ಸೀಸ್​)

Leave a Reply

Your email address will not be published. Required fields are marked *