ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್ಎಸ್ಆರ್ಪಿ) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಭಾನುವಾರ (ಸೆ.15)ಕ್ಕೆ ಮುಕ್ತಾಯವಾಗುತ್ತಿದೆ. ಹೊಸ ಪ್ಲೇಟ್ ಅಳವಡಿಸದ ವಾಹನಗಳ ವಿರುದ್ಧ ಸದ್ಯ ದಂಡ ವಿಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ಕೈಗೊಂಡಿಲ್ಲ. ಹೀಗಾಗಿ ವಾಹನ ಮಾಲೀಕರು ನಿರಾಳರಾಗಿರಬಹುದು. ಆದರೆ ನಂಬರ್ ಪ್ಲೇಟ್ ಅಳವಡಿಸುವ ಗಡುವನ್ನು ಡಿಸೆಂಬರ್ವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
ಸೆ.16ರಿಂದ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ನಂಬರ್ ಪ್ಲೇಟ್ ಅಳವಡಿಕೆ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಸೆ.18ರಂದು ಹೈಕೋರ್ಟ್ನಲ್ಲಿ ಬರಲಿದೆ. ಹೀಗಾಗಿ ದಂಡ ವಿಧಿಸುವ ಬಗ್ಗೆ ಇಲಾಖೆ ಅಧಿಕಾರಿಗಳು ತೀರ್ವನಿಸಿಲ್ಲ. ವಿಚಾರಣೆ ನಂತರ ದಂಡ ವಿಧಿಸುವುದೋ ಅಥವಾ ಮತ್ತೆ ಗಡುವು ವಿಸ್ತರಿಸುವುದೋ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್ಎಸ್ಆರ್ಪಿ ಅಳವಡಿಸುವ ಗಡುವನ್ನು ಮೂರು ಬಾರಿ ವಿಸ್ತರಿಸಿದರೂ ಅಳವಡಿಸಿಕೊಳ್ಳಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ರಾಜ್ಯದ 1.70 ಕೋಟಿ ಹಳೇ ವಾಹನಗಳ ಪೈಕಿ ಈವರೆಗೆ 50 ಲಕ್ಷ ವಾಹನಗಳಿಗಷ್ಟೇ ಅಳವಡಿಸಿಕೊಂಡಿರುವುದರಿಂದ ಗಡುವು ವಿಸ್ತರಣೆ ಅನಿವಾರ್ಯವಾಗಿದೆ. 2019ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಹಳೇ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಿದೆ. ನಂಬರ್ ಪ್ಲೇಟ್ ಜೋಡಣೆ ಪ್ರಕ್ರಿಯೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್ಗಳಿಗೆ ಟೆಂಡರ್ ಮುಖೇನ ಕೊಡಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ಕೊಡಲಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಅಂದಾಜು 4000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ.
4ನೇ ಬಾರಿ ವಿಸ್ತರಣೆ?: 2023ರ ಆ.18ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಎಚ್ಎಸ್ಆರ್ಪಿ ಹಾಕಿಸಲು 2023ರ ನ.17ರ ಗಡುವು ವಿಧಿಸಿತ್ತು. ಮಾಲೀಕರ ನಿರಾಸಕ್ತಿ ಹಿನ್ನೆಲೆ 2024ರ ಫೆ.17ರವರೆಗೆ ಮತ್ತೆ ಮೇ 31ರವರೆಗೆ, ಪುನಃ ಸೆ.15ರವರೆಗೆ ಅವಕಾಶ ನೀಡಲಾಗಿತ್ತು.
ಪ್ಲೇಟ್ ಹಾಕಿಸುವುದು ಹೇಗೆ?: Transport.karnataka.gov.in A¥ÜÊÝ www.siam.inಗೆ ಭೇಟಿ ಕೊಟ್ಟು ಬುಕ್ ಎಚ್ಎಸ್ಆರ್ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.
ಬಿಜೆಪಿ ಶಾಸಕ ಮುನಿರತ್ನ ಬಂಧನ ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮೊದಲ ಪ್ರತಿಕ್ರಿಯೆ ಹೀಗಿದೆ..!