ತಾಲೂಕು ಘೋಷಣೆಗೆ ಆಗ್ರಹಿಸಿ ಕುಡಚಿ ಬಂದ್

ಕುಡಚಿ: ಚಳಿಗಾಲ ಅಧಿವೇಶನದಲ್ಲಿ ಕುಡಚಿ ಹೋಬಳಿ ಹೊಸ ತಾಲೂಕು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ನೂರಾರು ಜನರು ಬಾಗಲಕೋಟೆ-ಸಾಂಗಲಿ, ಕುಡಚಿ-ರಾಯಬಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವ್ಯಾಪಾಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶಾಲೆ- ಕಾಲೇಜ್‌ಗಳು ಹೋರಾಟ ಬೆಂಬಲಿಸಿ ಬಂದ್ ಆಗಿದ್ದವು.
ಕುಡಚಿ ತಾಲೂಕು ರಚನೆ ಹೋರಾಟ ಸಮಿತಿ ಸದಸ್ಯರು ಮಾತನಾಡಿ, ಕುಡಚಿ ವಿಧಾನಸಭೆ ಕ್ಷೇತ್ರವನ್ನೂ ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಕುಡಚಿ ಪಟ್ಟಣವನ್ನು ತಾಲೂಕು ಕೇಂದ್ರ ವಾಗಿ ಘೋಷಣೆ ಮಾಡಬೇಕು. ಕುಡಚಿ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕುಡಚಿ ಪಟ್ಟಣ ಎಲ್ಲ ರೀತಿಯಿಂದಲೂ ತಾಲೂಕು ಕೇಂದ್ರವಾಗಲು ಅರ್ಹವಾಗಿದೆ ಎಂದು ಹೇಳಿದರು.

25 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಸಲು ಮನಸ್ಸು ಮಾಡುತ್ತಿಲ್ಲ. ಕಚೇರಿಗಳಿಗೆ ಸ್ವಂತ ಜಾಗ, ಕಟ್ಟಡವಿದೆ. ಮತ್ತೆ ಜಾಗ ಬೇಕಾದರೂ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ. ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕುಡಚಿ ಶಾಸಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕುಡಚಿ ತಾಲೂಕು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಡಿ.ಎಸ್.ಜಮಾದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್, ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.

ಮೌಲಾನಾ ಅಲ್ತಾಫ್ ಪಟಾಯಿತ್, ಜಿಪಂ ಸದಸ್ಯ ಅಕ್ಭರಲಿ ಮಾರೂಫ್, ಕುಡಚಿ ತಾಲೂಕು ಹೋರಾಟ ಸಮಿತಿ ಮುಖಂಡರಾದ ಮುಸ್ತಾಕ್ ಭಾಕಸಿರಾಜ್, ಅಮೀನುದ್ದೀನ್ ವಾಟೆ, ಬಾಶಾಲಾಲ್ ರೋಹಿಲೆ, ಸರ್ಪರಾಜ್ ಕರೀಂಖಾನ್, ರಾವಸಾಬ ಪಾಟೀಲ, ಬೀರಪ್ಪ ನರಟ್ಟಿ, ಎಚ್.ಎನ್.ಘಾಳಿ, ಸೈಯದ್ ದೇಸಾಯಿ, ಆತೀಬ್ ಪಟಾಯಿತ್, ಸುಕುಮಾರ ಪಾಟೀಲ, ಇಜಾಜ್ ಬಿಚ್ಚು, ಶಾಂತಾರಾಮ ಸಣ್ಣಕ್ಕಿ, ಸುಲ್ತಾನ ವಾಟೆ, ಶ್ರೀಶೈಲ ದರೂರೆ ಹಾಗೂ ಮುಖಂಡರು ಇದ್ದರು. ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.