More

    ಎಸ್‌ಸಿಗಳಿಗೆ 228 ಎಕರೆ ಕೃಷಿ ಜಮೀನು

    ಬೆಳಗಾವಿ: ಭೂ ಒಡೆತನ ಯೋಜನೆಯಡಿ ಜಿಲ್ಲೆಯಲ್ಲಿ ಭೂ ರಹಿತ ಎಸ್‌ಸಿ ಫಲಾನುಭವಿಗಳಿಗೆ 228 ಎಕರೆ ಕೃಷಿ ಜಮೀನು ಖರೀದಿಸಿ ಹಸ್ತಾಂತರಿಸಲು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅನುಮತಿ ನೀಡಿದ್ದಾರೆ.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಆಯೋಜಿಸಿದ್ದ ಭೂ ಒಡೆತನ ಯೋಜನೆಯಡಿ ಕೃಷಿ ಭೂಮಿಗೆ ದರ ನಿಗದಿ ಪಡಿಸುವ ಸಭೆಯಲ್ಲಿ ಜಿಲ್ಲಾಧಿಕಾರಿಗಳು 217 ಎಸ್‌ಸಿ ಫಲಾನುಭವಿಗಳಿಗೆ ಮಳೆಯಾಶ್ರಿತ ಮತ್ತು ನೀರಾವರಿ ಕೃಷಿ ಭೂಮಿ ಸೇರಿ 228 ಎಕರೆ ಭೂಮಿ ಹಂಚಿಕೆ ಮಾಡಲು ದರ ನಿಗದಿ ಪಡಿಸಿದರು.

    ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಅಥಣಿ, ರಾಯಬಾಗ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ, ಚಿಕ್ಕೋಡಿ ಸೇರಿ ವಿವಿಧ ತಾಲೂಕುಗಳಿಂದ 217 ಎಸ್‌ಸಿ ಫಲಾನುಭವಿಗಳು ಮತ್ತು ಕೃಷಿ ಭೂಮಿ ಕೊಡುವ 80 ಜನ ಮಾಲೀಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈಚೆಗೆ ನೋಂದಣಿ ಆಗಿರುವ ದರದ ಮೂರು ಪಟ್ಟು ಖುಷ್ಕಿ ಜಮೀನು, ನೀರಾವರಿ ಜಮೀನು ಖರೀದಿಸಲು ಡಿಸಿ ಸೂಚನೆ ನೀಡಿದರು.

    25 ಕೋಟಿ ರೂ. ನೆರವು: ಆಯಾ ತಾಲೂಕಿನಲ್ಲಿ ಕೃಷಿ ಭೂಮಿ ಫಲವತ್ತತೆ ಮತ್ತು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈಚೆಗೆ ನೋಂದಣಿ ಆಗಿರುವ ದರದ ಮೇಲೆ ತಲಾ ಎಕರೆಗೆ 10 ಲಕ್ಷ ರೂ. ಸರಾಸರಿಯಂತೆ ದರ ನಿಗದಿ ಪಡಿಸಲಾಗಿದೆ. ಇದರದಲ್ಲಿ ನೀರಾವರಿ ಮತ್ತು ಖುಷ್ಕಿ ದರಗಳು ಬೇರೆ ಬೇರೆ ಆಗಿರುತ್ತವೆ. ಭೂಮಿ ಪಡೆದುಕೊಳ್ಳುತ್ತಿರುವ ಫಲಾನುಭವಿಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.

    ಸರ್ಕಾರದ ಆರ್ಥಿಕ ಸಹಾಯಧನದಲ್ಲಿ ಭೂಮಿ ಖರೀದಿಸಿ ಬಳಿಕ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮುಂದಾದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. 228 ಎಕರೆ ಭೂಮಿ ಖರೀದಿಗೆ ಸರ್ಕಾರವು ಸುಮಾರು 25 ಕೋಟಿ ರೂ. ವರೆಗೆ ಆರ್ಥಿಕ ಸಹಾಯ ನೀಡುತ್ತಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಪ್ರಕಾಶ ಹರಗಾಪುರ, ಎಸ್‌ಸಿ ಫಲಾನುಭವಿಗಳು, ಭೂ ಮಾಲೀಕರು ಇತರರು ಇದ್ದರು.

    ಭೂ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ

    ಸರ್ಕಾರಿ ನಿಯಮದಂತೆ ಖುಷ್ಕಿ ಕೃಷಿ ಜಮೀನು ಖರೀದಿಸುವವರಿಗೆ ತಲಾ 2 ಎಕರೆ ಮತ್ತು ನೀರಾವರಿ ಕೃಷಿ ಜಮೀನು ಖರೀದಿಸಲು ಮುಂದಾಗುವವರಿಗೆ ತಲಾ 1 ಎಕರೆ ಭೂಮಿ ಖರೀದಿಸಲು ಅವಕಾಶ ಇದೆ. ಹಾಗಾಗಿ ಭೂ ಒಡೆತನದ ಯೋಜನೆಯಡಿ ಕೃಷಿ ಜಮೀನು ಮಾರಾಟ ಮಾಡಲು ಬಂದಿರುವ 80 ರೈತರಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈಚೆಗೆ ನೋಂದಣಿ ಆಗಿರುವ ದರದ ಮೂರು ಪಟ್ಟು ದರದಲ್ಲಿ ಭೂಮಿ ಖರೀದಿಸಲಾಗುವುದು. ವಾಣಿಜ್ಯ ದರದಲ್ಲಿ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ನಿಯಮಕ್ಕೆ ಒಪ್ಪಿಕೊಳ್ಳುವವರ ಭೂಮಿ ಮಾತ್ರ ಖರೀದಿಸಲಾಗುವುದು. ಸಭೆಯ ಬಳಿಕ ದರ ಕಡಿಮೆ ಆಗಿದೆ ಎಂದು ವಾಪಸ್ ಪಡೆದುಕೊಳ್ಳುವ ಹಾಗಿಲ್ಲ ಎಂದು ಭೂಮಿ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts