ಮಾನ್ವಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಇದುವರೆಗೂ ಜಾರಿ ಮಾಡದೆ ಇರುವುದನ್ನು ಖಂಡಿಸಿ ಅ.3 ರಂದು ಮಾನ್ವಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯ ಸಂಚಾಲಕ ಜಯಪ್ರಕಾಶ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿಗೆ ಶೇ. 15 ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುತ್ತಿರುವುದರಿಂದ ಬಹುಸಂಖ್ಯಾತರಾಗಿರುವ ಮಾದಿಗ ಮತ್ತು ಮಾಲಾ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಸ್ಪರ್ಶ ಸಮುದಾಯಗಳಾದ ಭೋವಿ, ಲಮಾಣಿ, ಕೊರಮ, ಕೊರವ, ಬೇಡ ಜಂಗಮ, ಅಲೆಮಾರಿಗಳಿಗೂ ಕೂಡ ಸಮಪಾಲು ದೊರೆಯುತ್ತಿರುವುದರಿಂದ ಅನ್ಯಾಯವಾಗುತ್ತಿದೆ.
ಸುಪ್ರೀಂಕೋರ್ಟ್ ಸದಾಶಿವ ಆಯೋಗದ ವರದಿಯನ್ನು ರಾಜ್ಯದಲ್ಲಿ ಜಾರಿಗೆ ತರುವಂತೆ ಆದೇಶ ನೀಡಿದರೂ ಇದುವರೆಗೂ ಜಾರಿಗೆ ಮಾಡಿಲ್ಲ. ಅದರಿಂದ ಆ.3 ರಂದು ಅಸ್ಪರ್ಶ ಮಾದಿಗ ಸಮುದಾಯಕ್ಕೆ ಶೇ. 6 ಮತ್ತು ಮಾಲಾ ಸಮುದಾಯಕ್ಕೆ ಶೇ.5 ಮೀಸಲಾತಿ ಹಂಚಿಕೆ ಮಾಡುವಂತೆ ಒತ್ತಾಯಿಸಿ ಶಾಂತಿಯುತವಾಗಿ ಮಾನ್ವಿ ಬಂದ್ ನಡೆಸಲಾಗುವುದು. ಬಂದ್‌ಗೆ ಮಾನ್ವಿಯ ಎಲ್ಲ ಶಾಲಾ, ಕಾಲೇಜು, ವ್ಯಾಪಾರಿಗಳು, ಸಂಘ, ಸಂಸ್ಥೆಯವರು ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯ ಸದಸ್ಯರಾದ ತಾಯಪ್ಪ ಬಿ.ಹೊಸೂರು, ಪ್ರಭುರಾಜ ಕೊಡ್ಲಿ, ಪಿ.ಪರಮೇಶ, ಮಾರೆಪ್ಪ ದೊಡ್ಡಮನಿ, ಯಲ್ಲಪ್ಪ ಬಾದರದಿನ್ನಿ, ಪಿ,ರವಿಕುಮಾರ, ಮೂಕಪ್ಪ ಕಟ್ಟಿಮನಿ, ಮಲ್ಲೇಶ ಜಗ್ಲಿ, ಪಿ.ಪ್ರವೀಣಕುಮಾರ್ ಬಸವರಾಜ ನಕ್ಕುಂದಿ, ಮಾರೇಶ ಭಂಡಾರಿ, ವಿನಯ್ ಕುಮಾರ್ ಇತರರಿದ್ದರು.