ಪಡಿತರಕ್ಕೆ ಕುಚ್ಚಿಲು ಅಕ್ಕಿ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಡಿತರ ನೀಡುವಾಗ ಕುಚ್ಚಿಲು ಅಕ್ಕಿಯನ್ನೇ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ-ಪರಿಶೀಲನೆ ಬಳಿಕ ಶನಿವಾರ ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದ.ಕ, ಉಡುಪಿ, ಉತ್ತರ ಕನ್ನಡದಲ್ಲೂ ಕುಚ್ಚಿಲು ಅಕ್ಕಿಗೆ ಬೇಡಿಕೆ ಹೆಚ್ಚಿದೆ. ಪ್ರಸ್ತುತ ಕೇವಲ ಬೆಳ್ತಿಗೆ ಮಾತ್ರ, ಕೆಲವೊಮ್ಮೆ ಅಪರೂಪಕ್ಕೆ ಕುಚ್ಚಿಲು ಅಕ್ಕಿ ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಆಯಾ ಪ್ರಾದೇಶಿಕ ಬೇಡಿಕೆಗೆ ಅನುಸಾರವಾಗಿ ಯುನಿಟ್‌ವೊಂದಕ್ಕೆ 5 ಕೆಜಿ ಬೆಳ್ತಿಗೆ ಅಕ್ಕಿ ಜತೆ 2 ಕೆಜಿ ಗೋಧಿ ಅಥವಾ ರಾಗಿ ಅಥವಾ ಜೋಳ ನೀಡಲಾಗುತ್ತದೆ. ಕರಾವಳಿಯಲ್ಲಿ ಇದಕ್ಕೆ ಬದಲು 7 ಕೆಜಿ ಬೆಳ್ತಿಗೆ ಅಕ್ಕಿ ನೀಡುವಂತೆ ಶಿಫಾರಸು ಮಾಡಿದ್ದೆವು, ಕುಚ್ಚಿಲಕ್ಕಿ ಖರೀದಿ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ, ಅದನ್ನು ಪರಿಶೀಲಿಸಿಕೊಂಡು, ಮುಂದೆ ಕುಚ್ಚಿಲು ಅಕ್ಕಿಯನ್ನೇ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಪಡಿತರ ಅಂಗಡಿ ಹೊಂದಿರುವ ಸಹಕಾರಿ ಸಂಘಗಳು ಭಾನುವಾರ ತೆರೆಯಲೇಬೇಕು. ಜಿಲ್ಲೆಯಲ್ಲಿ ಹಲವು ಕಾರಣ ನೀಡಿ ಅವುಗಳು ತೆರೆಯುದಿಲ್ಲ ಎಂದಾದರೆ ಅದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಇಲ್ಲವಾದರೆ ಕೂಲಿಕಾರರು, ಬಡವರು ಪಡಿತರ ಪಡೆಯಲು ತೊಂದರೆಯಾಗುತ್ತದೆ ಎನ್ನುವುದನ್ನು ಅರಿತುಕೊಂಡಿದ್ದೇವೆ.
– ಕೃಷ್ಣಮೂರ್ತಿ, ರಾಜ್ಯ ಆಹಾರ ಆಯೋಗ ಅಧ್ಯಕ್ಷ