ಸಾಲ ಮನ್ನಾಕ್ಕಾಗಿ ರೈತರಿಂದ ಬೃಹತ್ ಪ್ರತಿಭಟನೆ

ಬೆಳಗಾವಿ: ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮಧ್ಯಾಹ್ನ ಆಗಮಿಸಿದ್ದ ರೈತರು, ಸುಮಾರು ಎರಡು ಗಂಟೆ ಕಾಲ ಮಾನವ ಸರಪಳಿ ನಿರ್ಮಿಸಿ ಚನ್ನಮ್ಮ ವೃತ್ತದಲ್ಲಿ ಕುಳಿತು ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಪ್ರತಿಭಟನೆಗಿಳಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಬಜೆಟ್ ಮಂಡನೆ ವೇಳೆಯಲ್ಲಿ ಪ್ರತಿ ಕುಟುಂಬದ ಎರಡು ಲಕ್ಷ ರೂ. ಮಾತ್ರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಇದು ಸರಿಯಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಯೊಬ್ಬ ರೈತರ ಬೆಳೆ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸ್ತ್ರೀ ಶಕ್ತಿ, ಸ್ವ ಸಹಾಯ ಮತ್ತು ಧರ್ಮಸ್ಥಳ ಸಂಘಗಳಲ್ಲಿ ಮಹಿಳೆಯರು ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿಗೊಳಿಸಬೇಕು. ಕಬ್ಬಿನ ಬಾಕಿ ಬಿಲ್ ಅನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಡಬೇಕು. ಪ್ರಸಕ್ತ ವರ್ಷದ ಕಬ್ಬಿನ ಬಿಲ್ ಅನ್ನು (3400 ರೂ.) ಮಹಾರಾಷ್ಟ್ರ ಮಾದರಿಯಲ್ಲಿ ನೀಡಬೇಕು. ರೈತರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೆಲಹೊತ್ತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ರೈತರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಅಪರ ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪ್ರತಿಭಟನೆ ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳನ್ನು ಆಲಿಸಬೇಕೆಂದು ರೈತರು ಪಟ್ಟು ಹಿಡಿದರು. ನಂತರ ಚನ್ನಮ್ಮವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಉರುಳು ಸೇವೆ: ಪ್ರತಿಭಟನೆ ವೇಳೆ ರೈತರೊಬ್ಬರು ಚನ್ನಮ್ಮ ವೃತ್ತದ ಸುತ್ತ ಒಂದು ಸುತ್ತು ಉರುಳು ಸೇವೆ ಮಾಡುವ ಮೂಲಕ ಗಮನ ಸೆಳೆದರು.
ಚೂನಪ್ಪ ಪೂಜೇರಿ, ಲಿಂಗರಾಜ ಪಾಟೀಲ, ಅಶೋಕ ಯಮಕನಮರಡಿ, ರವಿ ಸಿದ್ದಮ್ಮನವರ, ಭರಮು ಖೇಮಲಾಪುರ, ಮಲ್ಲಿಕಾರ್ಜುನ ರಾಮದುರ್ಗ, ಮಹಾದೇವ ಮಡಿವಾಳ, ಕಲ್ಲಣಗೌಡ ಪಾಟೀಲ, ಜಯಶ್ರೀ ಗುರನ್ನವರ, ಗೋಪಾಳ ಕುಕನುರ, ವೀರೇಶ ಮಂಡೆದ, ಶಿವಾನಂದ ದೊಡವಾಡ, ಮಂಜು ಪೂಜೇರಿ, ಮಹಾಂತೇಶ ಕಮತ ಸೇರಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂಸದ ಸುರೇಶ ಅಂಗಡಿ ಕಚೇರಿಗೆ ಮುತ್ತಿಗೆ

ಪ್ರತಿಭಟನೆ ಮುಂದುವರಿಸಿ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಕಾಡಾ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ಸಂಸದ ಸುರೇಶ ಅಂಗಡಿ ಅವರನ್ನು ಪ್ರತಿಭಟನೆಯ ಸ್ಥಳಕ್ಕೆ ಕರೆ ತಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಇನ್ನೂ ಅನೇಕ ಕುಟುಂಬಗಳಿಗೆ ಫಸಲ್ ಬಿಮಾ ಯೋಜನೆಯ ಹಣ ತಲುಪಿಲ್ಲ ಎಂದು ರೈತರು ಸಂಸದರಿಗೆ ದೂರು ನೀಡಿದರು.
ಈ ವೇಳೆ ಮಾತನಾಡಿದ ಸಂಸದ ಸುರೇಶ ಅಂಗಡಿ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಾಥ್ ನೀಡಿದರು.

ಸಾರ್ವಜನಿಕರ ಪರದಾಟ

ಜಿಲ್ಲೆಯ ನೂರಾರು ರೈತರು ಪ್ರತಿಭಟನೆ ಮಾಡುವ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ಹಾಗೂ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನೂರಾರು ಪೊಲೀಸರು ಬೆಳಗ್ಗೆ 8 ಗಂಟೆಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯ ನಿರ್ವಹಿಸಿದರು. ಆದರೆ ಸಾರ್ವಜನಿಕರು ಪ್ರತಿಭಟನೆಯಿಂದ ಪರದಾಡಬೇಕಾಯಿತು.

ತುರ್ತು ಕಾರ್ಯಕ್ಕೆ ತೆರಳಬೇಕಾದವರು, ಮಹಿಳೆಯರು, ಮಕ್ಕಳಿಗೆ ಪ್ರತಿಭಟನಾಕಾರರು ಅವಕಾಶ ನೀಡದೇ ಸಂಚಾರ ತಡೆ ನಡೆಸಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಕೆಲವರು ಪ್ರತಿಭಟನಾಕಾರರೊಂದಿಗೆ ವಾಗ್ವಾದಕ್ಕೂ ಇಳಿದರು. ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡುತ್ತಿದ್ದುದು ಗಮನ ಸೆಳೆಯಿತು.