More

    ಬದುಕಿಗೆ ಭಾರವಾದ ಬೋರೆ

    | ಅಕ್ಕಪ್ಪ ಮಗದುಮ್ಮ ಬೆಳಗಾವಿ

    ಏಕಾಏಕಿ ಆ್ಯಪಲ್ ಬೋರೆ ಬೆಲೆ ಕುಸಿದಿದ್ದರಿಂದ ಬೆಳೆಗಾರರು ಆತಂಕಗೊಂಡಿದ್ದಾರೆ. ಕಳೆದ ವರ್ಷ ಇದೇ ಹಂಗಾಮಿನಲ್ಲಿ ಕೆ.ಜಿ.ಗೆ 70 ರಿಂದ 80 ರೂ. ಇದ್ದ ಬೋರೆ ಹಣ್ಣಿಗೆ ಈ ವರ್ಷ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿ ಅನುಭವಿಸಿದ್ದ ರೈತರು, ದ್ರಾಕ್ಷಿಗೆ ಪರ್ಯಾಯ ಬೆಳೆಯಾಗಿ ಆ್ಯಪಲ್ ಬೋರೆ ಬೆಳೆದಿದ್ದರು. ಆದರೆ, ರೈತರಿಗೆ ಎಂದಿಗೂ ಸಂಕಷ್ಟ ತಪ್ಪದು ಎಂಬಂತೆ ಮಾರುಕಟ್ಟೆಯಲ್ಲಿ ಈ ಬಾರಿ ಬೋರೆ ಹಣ್ಣಿನ ಬೆಲೆಯೂ ದಿಢೀರ್ ಕುಸಿದಿದೆ. ಇದು ಬೋರೆ ಬೆಳೆಗಾರರಿಗೆ ದಿಕ್ಕೇ ತೋಚದಂತಾಗಿದೆ.

    ಗಾಯದ ಮೇಲೆ ಬರೆ : ಮೊದಮೊದಲು ನೆರೆಯ ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಬೋರೆ ಹಣ್ಣನ್ನು ಈಗ ಗಡಿಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳ ರೈತರು ಬೆಳೆಯುತ್ತಿದ್ದಾರೆ. ಶೂನ್ಯ ಬಂಡವಾಳದ, ಅಧಿಕ ಇಳುವರಿ ಕೊಡುವ ಆ್ಯಪಲ್ ಬೋರೆಯನ್ನು ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ರೈತರು ಮಾತ್ರ ಬೆಳೆಯುತ್ತಿದ್ದರು. ಈ ಹಣ್ಣಿಗೆ ಕಳೆದ 2-3 ವರ್ಷಗಳಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಅನೇಕ ರೈತರು ಬೋರೆ ಬೆಳೆದು ಭರ್ಜರಿ ಲಾಭ ಪಡೆಯುತ್ತಿದ್ದರು. ಆದರೆ, ಈಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಇಳುವರಿಯೂ ಕುಂಠಿತ: ಪ್ರಸಕ್ತ ಸತತ ಮಳೆ, ನೆರೆಹಾವಳಿ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಬೋರೆ ಗಿಡಗಳು ಉತ್ತಮವಾಗಿ ಬೆಳೆದಿಲ್ಲ. ಅತಿಯಾದ ಮಳೆಯಿಂದ ತೋಟದಲ್ಲಿ ನೀರು ನಿಂತು, ಗಿಡಗಳು ಹೆಚ್ಚಾಗಿ ಹೂವು-ಕಾಯಿ ಕಟ್ಟಿಲ್ಲ. ಇದರಿಂದ ಗಣನೀಯವಾಗಿ ಇಳುವರಿಯೂ ಕಡಿಮೆಯಾಗಿದೆ. ಕೆಲವು ಕಡೆ ಬೋರೆ ತೋಟಗಳು ನೆರೆಗೆ ಸಿಲುಕಿ ನಾಶವಾಗಿವೆ. ಆ್ಯಪಲ್ ಬೋರೆಗೆ ದ್ರಾಕ್ಷಿ ಬೆಳೆಗಿಂತ ಕಡಿಮೆ ನೀರು ಸಾಕು. ಇದಕ್ಕೆ ಕೀಟ ಬಾಧೆಯೂ ಕಡಿಮೆ. ಹೀಗಾಗಿ ರೈತರು ಬೋರೆ ಬೆಳೆಯತ್ತ ಮುಖ ಮಾಡಿದ್ದರು. ಆದರೆ, ಈ ಬೆಳೆಯೂ ಬದುಕಿಗೆ ಆಸರೆಯಾಗುವ ಬದಲು ಭಾರವಾಗುವಂತಾಗಿದೆ.

    ಹೊಲದತ್ತ ಸುಳಿಯದ ವ್ಯಾಪಾರಸ್ಥರು

    ಕಳೆದ ವರ್ಷ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಒಟ್ಟು 320 ಹೆಕ್ಟೇರ್ ಪ್ರದೇಶದಲ್ಲಿ ಬೋರೆ ಬೆಳೆಯಲಾಗಿತ್ತು. ಇದರಿಂದ ಶೇ. 52ರಷ್ಟು ಬೆಳೆಯ ಕ್ಷೇತ್ರವೂ ವಿಸ್ತರಣೆಯಾಗಿತ್ತು. ಆದರೆ, ಈ ಬಾರಿ ಪ್ರವಾಹದಿಂದಾಗಿ ಕೇವಲ 150 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಆ್ಯಪಲ್ ಬೋರೆ ಬೆಳೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 50ರಷ್ಟು ಬೋರೆ ಬೆಳೆ ಕಡಿಮೆಯಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಆ್ಯಪಲ್ ಬೋರೆಗೆ ಹೆಚ್ಚಿನ ಬೇಡಿಕೆ ಇಲ್ಲದ್ದರಿಂದ ವ್ಯಾಪಾರಸ್ಥರು ಹೊಲದತ್ತ ಸುಳಿಯುತ್ತಿಲ್ಲ. ಹೀಗಾಗಿ ಬೆಲೆಯೂ ಏಕಾಏಕಿ ಕುಸಿತ ಕಂಡಿದೆ. ಹೀಗಾಗಿ ಸರ್ಕಾರ ಬೋರೆ ಬೆಳೆಗಾರರ ನೆರವಿಗೆ ಧಾವಿಸಬೇಕು ರೈತರು ವಿನಂತಿಸಿದ್ದಾರೆ.


    ಈ ವರ್ಷ ಮೋಡಕವಿದ ವಾತಾವರಣ ಹಾಗೂ ಚಳಿ ಹೆಚ್ಚಾಗಿರುವುದರಿಂದ ಇಳುವರಿ ಕಡಿಮೆ ಆಗಿದೆ. ಅಲ್ಲದೆ, ಬಿಸಿಲು ಹೆಚ್ಚಾದಂತೆ ಬೋರೆ ಧಾರಣೆ ಹೆಚ್ಚಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲೂ ಸದ್ಯ ಆ್ಯಪಲ್ ಬೋರೆಗೆ
    ಬೇಡಿಕೆ ಕಡಿಮೆಯಾಗಿದೆ.
    | ಎಸ್.ಎಲ್. ಕುಡ್ಡಣ್ಣವರ ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ, ಅಥಣಿ

    ಸತತ ಮಳೆ ಹಾಗೂ ನೆರೆಯಲ್ಲೂ 2 ಎಕರೆ ಬೋರೆ ಬೆಳೆದಿದ್ದೆ. ಆದರೆ, ಮಾರುಕಟ್ಟೆಯಲ್ಲಿ ಹಣ್ಣು ಕೇಳುವವರೇ ಇಲ್ಲ. ಕಳೆದ ವರ್ಷ ಕೆಜಿಗೆ 70 ರೂ.ಗೆ ಮಾರಾಟವಾಗುತ್ತಿದ್ದ ಬೋರೆ ಈಗ ಕೇವಲ 20 ರೂ.ಗೆ ಮಾರಾಟವಾಗುತ್ತಿದೆ. ಅತಿವೃಷ್ಟಿಯಿಂದ ಬೋರೆ ಗಿಡಗಳು ನಾಶವಾಗಿದ್ದು, ಇಳುವರಿಯೂ ಕುಂಠಿತವಾಗಿದೆ. ಬೆಳೆಗಾರರ ಗೋಳು ಯಾವ ವರ್ಷವೂ ತಪ್ಪುತ್ತಿಲ್ಲ.
    | ರಾಜೀವ ಕೊಡಗ ಬೋರೆ ಬೆಳೆಗಾರ, ಕೋಹಳ್ಳಿ, ಅಥಣಿ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts