ಗೊಳಸಂಗಿ: ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ (ಪಿಕೆಪಿಎಸ್) ದ 5 ವರ್ಷದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಶೇಖರ ಅಪ್ಪಣ್ಣಪ್ಪ ದಳವಾಯಿ, ಉಪಾಧ್ಯಕ್ಷರಾಗಿ ಸುದೇಶ ಬಸವರಾಜ ಪರಮಗೊಂಡ ಸೋಮವಾರ ಅವಿರೋಧವಾಗಿ ಆಯ್ಕೆಗೊಂಡರು.
ರಿಟರ್ನಿಂಗ್ ಆಫೀಸರ್ ಬಿ.ಐ.ಚಲ್ಮಿ ಕಾರ್ಯ ನಿರ್ವಹಿಸಿದರು. ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡಿರುವ ಸಹದೇವ ಪವಾರ, ಅಮೃತ ಯಾದವ ಹೊರತುಪಡಿಸಿ ಶೇಖರ ದಳವಾಯಿ, ಸುದೇಶ ಪರಮಗೊಂಡ, ರಾಜೇಶ್ವರಿ ಹೆಬ್ಬಾಳ, ಮಹಿಬೂಬ ಹತ್ತರಕಿಹಾಳ, ಶಿವಾನಂದ ಗೋಣಿ, ಚನ್ನಮಲ್ಲ ಉಳ್ಳಿ, ಅಮರಪ್ಪ ಬುಜಂಗೋಳ, ಬೀಬಿಜಾನ್ ಜಾಗೀರದಾರ, ಬಸವರಾಜ ಚಲವಾದಿ ಮಾತ್ರ ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರಸ್ವಾಮಿ ದೇವಾಂಗಮಠ ಸಹಾಯಕರಾಗಿ ಇದ್ದರು.
ಅಸಮಾಧಾನದ ಹೊಗೆ: ಗೊಳಸಂಗಿ ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಸೋಮವಾರ ಅವಿರೋಧವಾಗಿ ಆಗಿದ್ದರೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಹದೇವ ಪವಾರ, ಅಮೃತ ಯಾದವ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದಿದ್ದರು.
ಸಂಘದ 11 ಸದಸ್ಯರ ಆಯ್ಕೆಯ ಸಂದರ್ಭದಲ್ಲಿ ಗ್ರಾಮದ ಪ್ರಮುಖರೆಲ್ಲ ಸೇರಿ ಅವಿರೋಧವಾಗಿ ಆಯ್ಕೆ ಮಾಡುವ ಕುರಿತು ಸಭೆ ಮಾಡಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ವೇಳೆ ಗ್ರಾಮದ ಪ್ರಮುಖರ ಮಧ್ಯಸ್ಥಿಕೆಯಲ್ಲಿ ಆಯ್ಕೆ ಮಾಡದೆ ಏಕಪಕ್ಷೀಯವಾಗಿ ಆಯ್ಕೆ ಮಾಡಿರುವುದು ನಮಗೆ ಅಸಮಾಧಾನವಾಗಿದೆ. ಹೀಗಾಗಿ ನಾವು ನಿರ್ದೇಶಕ ಮಂಡಳಿಗೆ ರಾಜೀನಾಮೆ ಸಲ್ಲಿಸುವುದಾಗಿ ಅಮೃತ ಯಾದವ ಬೆಂಬಲಿಗರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರಸ್ವಾಮಿ ದೇವಾಂಗಮಠ ರಾಜೀನಾಮೆ ಪತ್ರ ಸ್ವೀಕರಿಸದೆ ಬೇರೊಂದು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರಿಂದಾಗಿ ಮಂಗಳವಾರ ತಾವೂ ಸೇರಿ ಸಹದೇವ ಪವಾರ ರಾಜೀನಾಮೆ ಸಲ್ಲಿಸುವುದಾಗಿ ನೂತನ ನಿರ್ದೇಶಕ ಅಮೃತ ಯಾದವ ತಿಳಿಸಿದರು.