ಕಂಪ್ಲಿ: ಪಟ್ಟಣದ ಇಂದಿರಾನಗರದ ಮೂರನೇ ವಾರ್ಡ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳನ್ನು ಸೆಳೆಯಲು ಅಲ್ಲಿನ ಮೇಷ್ಟ್ರುಗಳು ಇನ್ನಿಲ್ಲದ ಸಾಹಸದಲ್ಲಿ ತೊಡಗಿದ್ದಾರೆ. ಮಕ್ಕಳಿರುವ ಪ್ರದೇಶದಲ್ಲೇ ಸಂಜೆಪಾಠ ಹೇಳಿಕೊಡುವ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಸಾಫ್ಟ್ವೇರ್ ಯುಗದ ಸೋಮಾರಿಗಳಿಗೆ ಐಪಿಎಲ್ ಪಾಠ! ಹೇಗೆ ಅಂತೀರಾ? ಈ ಸುದ್ದಿ ಓದಿ
ಪಟ್ಟಣದ ಕುಂಬಾರ ಓಣಿಯಲ್ಲಿ 1959ರಲ್ಲಿ ಬಸವೇಶ್ವರ ಶಾಲೆಯೆಂದೇ ಪ್ರಖ್ಯಾತವಾಗಿದ್ದ ಈ ಶಾಲೆ 1999ರಲ್ಲಿ ಇಂದಿರಾನಗರಕ್ಕೆ ವರ್ಗವಾಯಿತು. ಮೂಲಸೌಕರ್ಯಗಳಿದ್ದರೂ ಕ್ರಮೇಣ ಮಕ್ಕಳ ಪ್ರವೇಶ, ಹಾಜರಾತಿ ಕುಸಿಯುತ್ತ ಬಂತು.
ಸದ್ಯ ಒಂದರಿಂದ ಐದನೇ ತರಗತಿತನಕ ಕೇವಲ ಹದಿನೆಂಟು ಮಕ್ಕಳಿದ್ದಾರೆ. ಸರಾಸರಿ ಐದು ಮಕ್ಕಳು ಹಾಜರು, ಆರು ಮಕ್ಕಳು ವಲಸೆ ತೆರಳಿದ್ದು, ಉಳಿದ ಏಳು ಮಕ್ಕಳಲ್ಲಿ ಒಬ್ಬ ದೈಹಿಕ ಅಂಗವಿಕಲನಿದ್ದು, ಉಳಿದವರು ಶಾಲೆಯತ್ತ ಮುಖ ಮಾಡುತ್ತಿಲ್ಲ.
ಈ ಶಾಲೆಗೆ ಆದಿವಾಸಿ ಬುಡಕಟ್ಟು ಹಕ್ಕಿಪಿಕ್ಕಿ ಸಮುದಾಯದ ಮಕ್ಕಳೇ ದಾಖಲಾಗಿದ್ದು, ಭಾಷೆ ಸಮಸ್ಯೆಯಿಂದಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ ಎನ್ನಲಾಗಿದೆ. ನಿತ್ಯವೂ ಮುಖ್ಯಶಿಕ್ಷಕ, ಸಹಶಿಕ್ಷಕ ಎಸ್.ಎಂ.ಸದಾಶಿವನಾಗಲಿ ಮಕ್ಕಳನ್ನು ಕರೆಯಲು ಹೋದಾಗ ಮಕ್ಕಳು ಹಲ್ಲುಜ್ಜುತ್ತಿರುತ್ತವೆ, ಎಲ್ಲೋ ಹೋಗಿರುತ್ತವೆ. ಕಳಿಸುವುದಾಗಿ ಪಾಲಕರು ಹೇಳುತ್ತಾರೆಯೇ ಹೊರತು ಕಳಿಸುವುದಿಲ್ಲ. ಐದಾರು ಮಕ್ಕಳನ್ನು ಶಾಲೆಗೆ ಹಿಡಿತರುವಷ್ಟರಲ್ಲಿ ಸಾಕುಬೇಕಾಗಿರುತ್ತದೆ.
ಹೀಗಾಗಿ ಶಾಲೆಗೆ ಬರಲು ಮಕ್ಕಳನ್ನು ಸೆಳೆಯಲು ಹದಿನೈದು ದಿನಗಳಿಂದ ಹಕ್ಕಿಪಿಕ್ಕಿ ಕಾಲನಿಯ ತುಳಜಾಭವಾನಿ ದೇವಸ್ಥಾನ ಆವರಣದಲ್ಲಿ ನಿತ್ಯ ಸಂಜೆ ಉಚಿತ ಪಾಠವನ್ನು ಮೇಷ್ಟ್ರುಗಳು ಹೇಳಿಕೊಡುತ್ತಿದ್ದಾರೆ. ಶಾಲೆಗೆ ಬರಬೇಕಿದ್ದ ಮಕ್ಕಳೊಡನೆ ಬೇರೆ ಮಕ್ಕಳು ಬರುತ್ತಿದ್ದಾರೆ.
ಈ ಶಾಲೆಗೆ ನ.29ರಂದು ತಹಸೀಲ್ದಾರ್ ಎಸ್.ಶಿವರಾಜ ನೇತೃತ್ವದಲ್ಲಿ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ, ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ ಸೇರಿ ಅಧಿಕಾರಿಗಳ ದಂಡು ಭೇಟಿ ನೀಡಿ ಪರಿಶೀಲಿಸಿ, ಪಾಲಕರ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಮಕ್ಕಳನ್ನು ಶಾಲೆಗೆ ಕರೆತರಲು ನಾನಾ ಪ್ರಯತ್ನ ನಡೆಸಿದ್ದೇವೆ. ಮಕ್ಕಳು ಕಲಿಕೆಯಿಂದ ವಂಚಿತವಾಗಬಾರದು ಎಂದು ಸಂಜೆ ಪಾಠ ಹೇಳಿಕೊಡುತ್ತಿದ್ದೇವೆ. ಮಕ್ಕಳ ಪಾಲಕರಿಗೆ ಶಿಕ್ಷಣದ ಮಹತ್ವ ತಿಳಿದಿಲ್ಲ, ಅನಕ್ಷರತೆ, ಬಡತನದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.
ವಿ.ವಸಂತ್
ಮುಖ್ಯಶಿಕ್ಷಕ, ಸಕಿಪ್ರಾ ಶಾಲೆ, ಇಂದಿರಾನಗರ, ಕಂಪ್ಲಿ
ಹಕ್ಕಿಪಿಕ್ಕಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕ, ಪೋಷಕರಿಗೆ ಕಟ್ಟುನಿಟ್ಟಾದ ಆದೇಶವಾಗಬೇಕು. ಮಕ್ಕಳನ್ನು ಶಾಲೆಗೆ ಕಳಿಸದಿದ್ದಲ್ಲಿ ಹಕ್ಕಿಪಿಕ್ಕಿಗಳ ಪಡಿತರ, ಇತರ ಸೌಲಭ್ಯ ನಿಲ್ಲಿಸುವ ಎಚ್ಚರಿಕೆ ನೀಡಬೇಕು. ವಾಗ್ರಿ ಭಾಷೆ ಮಾತಾಡುವ ಕಾಲನಿಯ ಶಿಕ್ಷಣವಂತನನ್ನು ಶಿಕ್ಷಕನನ್ನಾಗಿ ನೇಮಿಸಬೇಕು.
ಎಚ್.ಪಿ.ಶಿಕಾರಿರಾಮು
ಸಂಘಟನಾ ಕಾರ್ಯದರ್ಶಿ, ರಾಜ್ಯ ಆದಿವಾಸಿ ರಕ್ಷಣಾ ಪರಿಷತ್, ಬೆಂಗಳೂರು
ಶಿಕ್ಷಕರೊಂದಿಗೆ ನಾನೂ ಮಕ್ಕಳನ್ನು ಕರೆತರಲು ಹೋಗಿದ್ದೇನೆ. ಪಾಲಕರು ಮಕ್ಕಳ ಶಿಕ್ಷಣ ಬಗ್ಗೆ ಒಲವು ತೋರಿಸುತ್ತಿಲ್ಲ. ಹಲವು ಸಲ ಮಕ್ಕಳು, ಪಾಲಕರು ಎಲ್ಲೋ ಹೋಗಿ ಬಿಡುತ್ತಾರೆ. ಸಂಜೆಪಾಠದಿಂದ ಮಕ್ಕಳು ಶಾಲೆಗೆ ಬರುವ ನಿರೀಕ್ಷೆಯಿದೆ.
ಎನ್.ಬಿ.ರೇಣುಕಾರಾಧ್ಯ
ಸಿಆರ್‌ಪಿ, ಕಂಪ್ಲಿ