ಧರ್ಮರಾಜ ಪಾಟೀಲ ಬೆಳಗಾವಿ
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಇನ್ಮುಂದೆ ಚಿಕ್ಕಿ ಬದಲಿಗೆ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶಿಸಿದೆ.
ಪೂರಕ ಪೌಷ್ಟಿಕಾಂಶದ ರೂಪದಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯ ಹಾನಿಕಾರಕ ಎನ್ನಬಹುದಾದಂಥ ಅಪರ್ಯಾಪ್ತ ಕೊಬ್ಬಿನಾಂಶ ಹೆಚ್ಚಿಗೆ ಇದ್ದು, ಇದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ.
ಚಿಕ್ಕಿಯನ್ನು ವ್ಯವಸ್ಥಿತವಾಗಿಸಂಗ್ರಹಿಸದಿದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ಚಿಕ್ಕಿಯೂ ನಿಗದಿತ ಪ್ರಮಾಣದಲ್ಲಿ ಇಲ್ಲದಿರುವುದು ಹಾಗೂ ಅವಧಿ ಮೀರಿದ ಚಿಕ್ಕಿಗಳ ವಿತರಣೆ ಕಂಡುಬಂದ ಹಿನ್ನೆಲೆಯಲ್ಲಿ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ, ಬಾಳೆಹಣ್ಣು ಅಥವಾ ಮೊಟ್ಟೆ ವಿತರಿಸುವಂತೆ ವಿವಿಧ ಜಿಲ್ಲೆಗಳಿಂದ ಕೂಗು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದೆ.
ಮಧ್ಯಾಹ್ನದ ಊಟ ತೆಗೆದುಕೊಳ್ಳುವ 54 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ.35 ವಿದ್ಯಾರ್ಥಿಗಳು ಮೊಟ್ಟೆ ಬದಲಿಗೆ ಚಿಕ್ಕಿ ಅಥವಾ ಬಾಳೆಹಣ್ಣು ಆರಿಸಿಕೊಳ್ಳುತ್ತಾರೆ. ನೀಡುತ್ತಿರುವ ಚಿಕ್ಕಿಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ ನಮಗೆ ವಿವಿಧ ಜಿಲ್ಲೆಗಳಿಂದ ದೂರುಗಳು ಬಂದ್ದಿದವು. ಆದ್ದರಿಂದ ಚಿಕ್ಕಿ ಕೈಬಿಡಲಾಗಿದೆ.
|ಡಾ. ತ್ರಿಲೋಕ್ ಚಂದ್ರ ಕೆ.ವಿ. ಶಾಲಾ ಶಿಕ್ಷಣ
ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು.
ಮಕ್ಕಳ ಆರೋಗ್ಯಕ್ಕೆ ಹುರಿಗಡಲೆ
ಮಕ್ಕಳಿಗೆ ಬೆಲ್ಲದ ಶೇಂಗಾ ಚಿಕ್ಕಿ ಬಹಳ ಉತ್ತಮ, ಸಕ್ಕರೆ ಮತ್ತು ಅಪರ್ಯಾಪ್ತ ಕೊಬ್ಬಿನ ಚಿಕ್ಕಿ ಬದಲಿಗೆ ವಿದ್ಯಾರ್ಥಿಗಳಿಗೆ ಕುದಿಸಿದ ಮತ್ತು ಉಪ್ಪು ಹಾಕಿದ ಕಡಲೆಕಾಯಿ ಅಥವಾ ಹುರಿಗಡಲೆ ನೀಡಬೇಕು. ಮಕ್ಕಳ ಆರೋಗ್ಯಕ್ಕೆ ಹುರಿಗಡಲೆ ತುಂಬಾ ಪ್ರಯೋಜನಕಾರಿ. 100 ಗ್ರಾಂ ಹುರಿದ ಕಡಲೆಯಿಂದ 364 ಕ್ಯಾಲರಿ ಇರುತ್ತದೆ. 19 ಗ್ರಾಂ ಪ್ರೋಟೀನ್, 6 ಗ್ರಾಂ ಕೊಬ್ಬು, 61 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ. ಇದರಿಂದ ಪ್ರತಿ ಚಿಕ್ಕ ಮಗುವಿಗೆ ಉತ್ತಮ ಪ್ರಮಾಣದ ಪೋಷಕಾಂಶಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞೆ ಡಾ.ಸೋನಾಲಿ ಸರ್ನೋಬತ್.