ಮಸ್ಕಿ: ಆರೋಗ್ಯಕರ ಬದುಕಿಗೆ ಯೋಗ ಉತ್ತಮ ಮದ್ದಾಗಿದೆ. ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಆಯೋಜಿಸಿರುವ ಯೋಗ ಉಚಿತ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಪ್ರಸ್ತುತ ವಾತಾವರಣ ಕಲುಷಿತವಾಗುತ್ತಿದ್ದು ಆರೋಗ್ಯವಾಗಿರಬೇಕಾದವರು ಅನಾರೋಗಕ್ಕೆ ಈಡಾಗುವಂತಾಗಿದೆ. ಸೇವಿಸುವ ಆಹಾರ, ಗಾಳಿ ಕಲುಷಿತಗೊಂಡಿದೆ. ಯೋಗದಿಂದ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಹೇಮಾವತಿ ಅಕ್ಕ, ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಸುಕಮುನಿಯಪ್ಪ ನಾಯಕ ಮಾತನಾಡಿದರು. ಯೋಗ ಗುರೂಜಿ ಬಸವಲಿಂಗಯ್ಯ ಹಿರೇಮಠ, ಉದ್ಯಮಿ ಪ್ರಕಾಶ ಧಾರಿವಾಲ್, ಶಿವರಾಜ ಯಂಬಲದ, ಅಮರೇಶ ಬ್ಯಾಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇದ್ದರು.