10 ವರ್ಷವಾದ್ರೂ ಶಿಕ್ಷೆಯಿಲ್ಲ

ಮುಂಬೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ‘26/11 ಉಗ್ರ ದಾಳಿ’ ಜರುಗಿ 10 ವರ್ಷ ಪೂರ್ಣಗೊಂಡರೂ ಸಂಚುಕೋರ ಉಗ್ರ ಹಫೀಜ್ ಸಯೀದ್, ಝುಕಿ-ಉರ್-ರೆಹಮಾನ್ ಲಖ್ವಿ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದ್ದಾರೆ. ಈ ಕುರಿತು ಹಲವು ಬಾರಿ ಫೋಟೊ, ವಿಡಿಯೋ ಹಾಗೂ ಇತರ ದಾಖಲೆಗಳನ್ನು ನೀಡಿದರೂ ಪಾಕಿಸ್ತಾನ ಸರ್ಕಾರ ಪರಿಣಾಮಕಾರಿ ಕ್ರಮ ಜರುಗಿಸಿಲ್ಲ ಎಂದು ಸೋಮವಾರ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

ಅಮೆರಿಕ ಹಾಗೂ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕೆಲಕಾಲ ಉಗ್ರ ಸಯೀದ್​ನನ್ನು ಗೃಹಬಂಧನದಲ್ಲಿ ಇರಿಸಿತ್ತು. ತನಿಖಾ ತಂಡದಿಂದ ಸೂಕ್ತ ಸಾಕ್ಷ್ಯಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಆತನನ್ನು ಕೋರ್ಟ್ ಬಂಧಮುಕ್ತಗೊಳಿಸಿದೆ. ‘26/11 ದಾಳಿಯ ಸಂಚುಕೋರರು ಪಾಕಿಸ್ತಾನದ ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಇಬ್ಬಗೆ ನೀತಿಯನ್ನು ಬದಿಗೊತ್ತಿ, ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪಾಕ್ ಸರ್ಕಾರ ಪ್ರಾಮಾಣಿಕ ಯತ್ನ ನಡೆಸಬೇಕು’ ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ.

ದೇಶವನ್ನೇ ನಡುಗಿಸಿದ್ದ ದಾಳಿ

  • 2008ರ ನ. 26ರಂದು ಕರಾಚಿಯಿಂದ ಮುಂಬೈಗೆ ದೋಣಿ ಮೂಲಕ ಬಂದಿದ್ದ 10 ಲಷ್ಕರ್ ಉಗ್ರರಿಂದ ದಾಳಿ
  • 17 ಭದ್ರತಾ ಸಿಬ್ಬಂದಿ ಸಹಿತ 165 ಮಂದಿ ಬಲಿ
  • 9 ಉಗ್ರರ ಹತ್ಯೆ, ಒಬ್ಬ ಉಗ್ರ (ಕಸಬ್) ಬಂಧನ
  • ವಿಚಾರಣೆ ಬಳಿಕ 2012ರಲ್ಲಿ ಕಸಬ್​ಗೆ ಗಲ್ಲುಶಿಕ್ಷೆ.

ವೀರರಿಗೆ ನಮನ

ಮುಂಬೈ ಪೊಲೀಸ್ ಜಿಮ್ಾನದಲ್ಲಿ ಹುತಾತ್ಮರ ಸ್ಮಾರಕಕ್ಕೆ ಸೋಮವಾರ ಗೌರವ ಸಲ್ಲಿಸಲಾಯಿತು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಸೇರಿ ಸಂಪುಟ ಸಚಿವರು ಹುತಾತ್ಮರಾದ ಪೊಲೀಸರು, ಭದ್ರತಾ ಪಡೆ ಸಿಬ್ಬಂದಿಗೆ ನಮನ ಸಲ್ಲಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ನಲ್ಲಿ ಯೋಧರನ್ನು ಸ್ಮರಿಸಿದ್ದಾರೆ.

ಸುಳಿವು ಕೊಟ್ಟವರಿಗೆ 35.3 ಕೋಟಿ

ಮುಂಬೈ ದಾಳಿ ನಡೆದು 10 ವರ್ಷಗಳಾದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಇದು ಸಂತ್ರಸ್ತ ಕುಟುಂಬ ಗಳಿಗೆ ಮಾಡಿದ ಅವಮಾನ ಎಂದು ಅಮೆರಿಕ ಸ್ಟೇಟ್ ಸೆಕ್ರೆಟರಿ ಮೈಕ್ ಪಾಂಪಿಯೊ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ದಾಳಿಕೋರರು, ಸಂಚುಕೋರರ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿದವರಿಗೆ 35.3 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ‘ರಿವಾರ್ಡ್ಸ್ ಆಫ್ ಜಸ್ಟೀಸ್ ಯೋಜನೆ ಅನ್ವಯ ಬಹುಮಾನ ನೀಡಲಾಗುವುದು. ಲಷ್ಕರ್-ಎ-ತೊಯ್ಬಾ ಸೇರಿ ಉಗ್ರ ಸಂಘಟನೆಗಳ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇರಿರುವ ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪಾಕಿಸ್ತಾನ ಮತ್ತು ಇತರ ದೇಶಗಳಿಗೆ ಆಗ್ರಹಿಸುತ್ತೇನೆ’ ಎಂದು ಪಾಂಪಿಯೊ ಪಾಕ್​ಗೆ ಚುರುಕುಮುಟ್ಟಿಸಿದ್ದಾರೆ.

ಟ್ವೀಟ್ ವಿವಾದ

ಉಗ್ರ ದಾಳಿಯ ವರ್ಷಾಚರಣೆ ಕುರಿತು ಸೋಮವಾರ ಟ್ವೀಟ್ ಮಾಡಿದ ಮೇಘಾಲಯ ರಾಜ್ಯಪಾಲ ತಥಾಗತ ರಾಯ್,‘ಪಾಕ್ ಪ್ರಾಯೋಜಿತ ಪ್ರಾಮಾಣಿಕರ ಮಾರಣಹೋಮ ( ಮುಸ್ಲಿಮರ ಹೊರತಾಗಿ) 26/11 ದಾಳಿ ನಡೆದು 10 ವರ್ಷವಾಯಿತು’ ಎಂದಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಅದನ್ನು ಡಿಲೀಟ್ ಮಾಡಿ, ದಾಳಿ ಬಗ್ಗೆ ನನಗೆ ತಪು್ಪ ಮಾಹಿತಿ ನೀಡಲಾಗಿತ್ತು ಎಂದಿದ್ದಾರೆ.

ಕಾಂಗ್ರೆಸ್​ಗೆ ಮೋದಿ ಚಾಟಿ

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಕಾಂಗ್ರೆಸ್ಸಿಗರು ಎಲ್ಲದಕ್ಕೂ ಸಾಕ್ಷ್ಯ ಕೇಳುತ್ತಾರೆ. ಯಾವುದಾದರೂ ಕಾರ್ಯಾಚರಣೆ ಅಥವಾ ಪ್ರತಿದಾಳಿಗೆ ತೆರಳುವ ಮುನ್ನ ಯೋಧರು ಜತೆಯಲ್ಲಿ ಕ್ಯಾಮರಾ ನೇತುಹಾಕಿಕೊಂಡು ಹೋಗಬೇಕೆ?’ ಎಂದು ಪ್ರಶ್ನಿಸಿದ್ದಾರೆ. 10 ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 26/11 ದಾಳಿ ನಡೆದಿತ್ತು. ಇದನ್ನೇ ಬಳಸಿಕೊಂಡು ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆದರೆ ದಾಳಿಯ ಸಂಚುಕೋರರಿಗೆ ನಮ್ಮ ಸರ್ಕಾರ ಶಿಕ್ಷೆ ವಿಧಿಸುವುದು ನಿಶ್ಚಿತ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.