ಫುಟ್‌ಪಾತ್ ಕಾಮಗಾರಿ ಸ್ಥಗಿತ

ಹರೀಶ್ ಮೋಟುಕಾನ ಮಂಗಳೂರು

ನೆಹರು ಮೈದಾನ ಬಳಿ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಕೆಲವು ತಿಂಗಳಿನಿಂದ ನಡೆಯುತ್ತಿದ್ದ ಚರಂಡಿ ಕಾಮಗಾರಿ ಸ್ಥಗಿತಗೊಂಡಿದ್ದು, ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದೆ.

ಮೊದಲು ಫುಟ್‌ಪಾತ್ ಉತ್ತಮವಾಗಿತ್ತು. ಸುಸಜ್ಜಿತ ಚರಂಡಿ ನಿರ್ಮಾಣಕ್ಕಾಗಿ ಫುಟ್‌ಪಾತ್ ತೆರವು ಮಾಡಿದ್ದರು. ಕಾಮಗಾರಿಯನ್ನು ಪೂರ್ಣಗೊಳಿಸದೆ, ಫುಟ್‌ಪಾತ್ ಕೂಡ ನಿರ್ಮಿಸದೆ ಹಾಗೆಯೇ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಹಳೇಯ ಫುಟ್‌ಪಾತ್‌ನಲ್ಲಿ ಸಾರ್ವಜನಿಕರಿಗೆ ನಡೆದಾಡಲು ಉತ್ತಮವಾಗಿತ್ತು. ಬೆಳಗ್ಗೆ ಮತ್ತು ಸಾಯಂಕಾಲದ ವೇಳೆಗೆ ಈ ಫುಟ್‌ಪಾತ್‌ನಲ್ಲಿ ವಾಕಿಂಗ್ ಮಾಡುತ್ತಿದ್ದರು. ಪ್ರಸ್ತುತ ಸಾರ್ವಜನಿಕರು ರಸ್ತೆ ಬದಿಯಲ್ಲೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಪ್ರತಿದಿನ ಆರ್‌ಟಿಒ, ಪುರಭವನ, ಪೊಲೀಸ್ ಆಯುಕ್ತರ ಕಚೇರಿ, ಎಸ್ಪಿ ಕಚೇರಿಗಳಿಗೆ ಬರುವ ಸಾವಿರಾರು ಮಂದಿ ಇಲ್ಲಿ ನಡೆದಾಡುತ್ತಾರೆ. ರೈಲ್ವೆ ನಿಲ್ದಾಣದಿಂದ ಬರುವವರು ಕೂಡ ಇದೇ ಫುಟ್‌ಪಾತ್‌ನಲ್ಲಿ ಸಾಗಿ ಬಂದು ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳಿಗೆ ಹೋಗುತ್ತಾರೆ. ಈ ರಸ್ತೆಯಲ್ಲಿ ಒಂದೆಡೆ ವಾಹನ ಪಾರ್ಕಿಂಗ್, ಇನ್ನೊಂದೆಡೆ ಫುಟ್‌ಪಾತ್ ವ್ಯವಸ್ಥೆ ಇಲ್ಲದಿರುವುದರಿಂದ ಜನನಿಬಿಡ ಪ್ರದೇಶವಾಗಿರುವ ಇಲ್ಲಿ ಪಾದಚಾರಿಗಳು ಪರದಾಡುವಂತಾಗಿದೆ.

ಚರಂಡಿಯಲ್ಲಿ ತ್ಯಾಜ್ಯ: ಚರಂಡಿ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿರುವುದರಿಂದ ಚರಂಡಿಯೊಳಗೆ ಪ್ಲಾಸ್ಟಿಕ್, ಪೇಪರ್ ತ್ಯಾಜ್ಯ ತುಂಬಿಕೊಂಡಿದೆ. ಕೆಲವರು ಈ ಚರಂಡಿಗೆ ಮೂತ್ರವಿಸರ್ಜನೆ ಮಾಡುತ್ತಿರುವುದರಿಂದ ಗಬ್ಬು ವಾಸನೆ ಬರುತ್ತಿದೆ. ರಾಮಕೃಷ್ಣ ಮಿಶನ್‌ನವರು ಈ ಪ್ರದೇಶದಲ್ಲಿ ಒಂದು ಬಾರಿ ಸ್ವಚ್ಛಗೊಳಿಸಿದ್ದು, ಇದೀಗ ಮತ್ತೆ ಕಸ ತುಂಬಿಕೊಂಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಹೆಚ್ಚಿನ ಜನತೆ ಸ್ವಚ್ಛತೆಯ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸದೇ ಇರುವುದು ವಿಪರ‌್ಯಾಸ ಎಂದು ಪರಿಸರ ಪ್ರೇಮಿ ವಿನೋದ್ ತಿಳಿಸಿದ್ದಾರೆ.

ಕಲ್ಲು, ಮಣ್ಣು ರಾಶಿ: ಕಾಮಗಾರಿ ಸಂದರ್ಭ ತೆಗೆದು ಹಾಕಿದ ಕಲ್ಲು, ಮಣ್ಣು ಅಲ್ಲೇ ರಾಶಿ ಹಾಕಲಾಗಿದೆ. ಸಾರ್ವಜನಿಕರು ನಡೆದಾಡದ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಕೂಡ ಕಳಪೆಯಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸಿಮೆಂಟು, ಕಲ್ಲು ಎದ್ದು ಹೋಗಿದೆ. ಸಂಬಂಧಪಟ್ಟ ಇಂಜಿನಿಯರ್‌ಗಳು ಈ ಕಾಮಗಾರಿಯನ್ನು ಪರೀಕ್ಷೆಗೊಳಪಡಿಸಿ, ನಿರ್ವಹಿಸಿದವರಿಗೆ ಬಿಲ್ ಪಾವತಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಒತ್ತಾಯಿಸಿದ್ದಾರೆ.

ನೆಹರು ಮೈದಾನ ಬಳಿಯಲ್ಲಿ ನಡೆಯುತ್ತಿದ್ದ ಚರಂಡಿ, ಫುಟ್‌ಪಾತ್ ಕಾಮಗಾರಿ ಹಲವು ಸಮಯಗಳಿಂದ ಸ್ಥಗಿತಗೊಂಡಿದೆ. ಚರಂಡಿಯಲ್ಲಿ ಕಸ ತುಂಬಿದೆ. ಸಂಬಂಧಪಟ್ಟವರು ಈ ಕಡೆಗೆ ಗಮನ ವಹಿಸಿಲ್ಲ. ಇದು ನಗರದ ಹೃದಯ ಭಾಗವಾದ ಕಾರಣ ನೂರಾರು ಮಂದಿ ಇಲ್ಲಿ ಓಡಾಡುತ್ತಾರೆ. ಆದಷ್ಟು ಶೀಘ್ರ ಈ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರು ಮುಕ್ತವಾಗಿ ನಡೆದಾಡಲು ಅವಕಾಶ ಕಲ್ಪಿಸಬೇಕು.
|ಸೂರಜ್, ಖಾಸಗಿ ಉದ್ಯೋಗಿ