ಫುಟ್‌ಪಾತೇ ಪ್ರಯಾಣಿಕರ ತಂಗುದಾಣ

ಹರೀಶ್ ಮೋಟುಕಾನ ಮಂಗಳೂರು
ಬೇಸಿಗೆಯಲ್ಲಿ ಬೆವರು ಒರೆಸಿಕೊಂಡು, ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ಬಸ್‌ಗಳಿಗೆ ಕಾಯುವ ಸ್ಥಿತಿ. ಪ್ರಯಾಣಿಕರ ತಂಗುದಾಣ ಇಲ್ಲದೆ ಇರುವುದರಿಂದ ಫುಟ್‌ಪಾತ್ ಮೇಲೆ ನಿಲ್ಲುವ ಸ್ಥಿತಿ ಹಲವು ಸಮಯಗಳಿಂದ ನಿರ್ಮಾಣವಾಗಿದೆ.
ಇದು ನಗರದ ಹೃದಯ ಭಾಗ ಪಿವಿಎಸ್ ವೃತ್ತ ಬಳಿ ಕಂಡುಬರುವ ಪ್ರತಿದಿನದ ಚಿತ್ರಣ. ಉಡುಪಿ, ಕಟೀಲು ಮೊದಲಾದ ಕಡೆಗೆ ಹೋಗುವ ಬಸ್‌ಗಳು ಬಂದು ನಿಲ್ಲುವ ಕುದ್ಮುಲ್‌ರಂಗರಾವ್ ವಿದ್ಯಾರ್ಥಿನಿಯರ ಹಾಸ್ಟೆಲ್ ಎದುರು ಹಾಗೂ ಆಕಾಶಭವನ ಮೂಲಕ ಸಾಗಿ ಬರುವ ಸುರತ್ಕಲ್ ಕಡೆಗೆ ಹೋಗುವ ಬಸ್‌ಗಳು ಬಂದು ನಿಲ್ಲುವ ಪಿವಿಎಸ್ ಸಿಗ್ನಲ್ ಬಳಿ ಪ್ರಯಾಣಿಕರ ತಂಗುದಾಣವಿಲ್ಲ. ಇದರಿಂದ ಪ್ರಯಾಣಿಕರು ಕಷ್ಟ ಪಡುವಂತಾಗಿದೆ.
ಉಡುಪಿಗೆ ಐದು ನಿಮಿಷಕ್ಕೊಂದು ಖಾಸಗಿ ಬಸ್ ಹೊರಡುತ್ತದೆ. ಇದರ ನಡುವೆ ಕಾಸರಗೋಡು, ಪುತ್ತೂರು, ಧರ್ಮಸ್ಥಳ ಮೊದಲಾದ ಕಡೆಗಳಿಂದ ಬಸ್‌ಗಳು ಪ್ರಯಾಣಿಕರನ್ನು ಇಳಿಸಲು ವಿದ್ಯಾರ್ಥಿನಿಯರ ಹಾಸ್ಟೆಲ್ ಎದುರು ನಿಲ್ಲುತ್ತವೆ. ಉಡುಪಿ, ಕಟೀಲು ಕಡೆಗೆ ಹೋಗುವ ಬಸ್‌ಗಳಿಗೆ ಕಾಯುವ ಪ್ರಯಾಣಿಕರು ತಂಗುದಾಣ ಇಲ್ಲದೆ ತೊಂದರೆ ಅನುಭವಿಸುಂತಾಗಿದೆ. ಫುಟ್‌ಪಾತ್‌ನಲ್ಲಿ ನಿಲ್ಲುವುದರಿಂದ ಪಾದಚಾರಿಗಳು ರಸ್ತೆಗೆ ಇಳಿದು ಹೋಗುವಂತಾಗಿದೆ. ಇದರಿಂದ ಹಿಂದಿನಿಂದ ಬರುವ ವಾಹನಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಆಕಾಶಭವನ ಮೂಲಕ ಸಾಗಿ ಬಂದು ಪಿವಿಎಸ್ ವೃತ್ತದಲ್ಲಿರುವ ಸಿಗ್ನಲ್ ಬಳಿ ನಿಲ್ಲುವ ಬಸ್‌ಗಳಿಗೆ ಮಧ್ಯಾಹ್ನ ಮತ್ತು ಸಾಯಂಕಾಲ ನೂರಾರು ಮಂದಿ ಸಾರ್ವಜನಿಕರು ಬಸ್‌ಗೆ ಕಾಯುತ್ತಿರುತ್ತಾರೆ. ಇಲ್ಲಿ ವಿದ್ಯಾರ್ಥಿಗಳು, ಸ್ಥಳೀಯ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ರಸ್ತೆ ಬದಿಯಲ್ಲೇ ನಿಂತು ಬಸ್‌ಗಳಿಗೆ ಕಾಯುವುದು ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ.
ನಗರದ ವಿವಿಧ ಕಡೆ ಸ್ಮಾರ್ಟ್ ಬಸ್ ತಂಗುದಾಣ ನಿರ್ಮಾಣವಾಗುತ್ತಿವೆ. ಪಿವಿಎಸ್ ಬಳಿ ಪ್ರಯಾಣಿಕರ ತಂಗುದಾಣ ಇದುವರೆಗೆ ನಿರ್ಮಾಣವಾಗಿಲ್ಲ. ಇಲ್ಲಿ ಸ್ಥಳಾವಕಾಶದ ಕೊರತೆಯಿಂದ ತಂಗುದಾಣ ನಿರ್ಮಾಣ ಅಸಾಧ್ಯ ಎನ್ನುವುದು ಅಧಿಕಾರಿಗಳ ಸಮಜಾಯಿಷಿ. ಕೆಲವು ಕಡೆ ಪ್ರಯಾಣಿಕರ ತಂಗುದಾಣ ಇರುವಲ್ಲಿಯೇ ಎರಡೆರಡು ನಿರ್ಮಾಣ ಮಾಡಿದ್ದಾರೆ. ಪಿವಿಎಸ್‌ನಂತಹ ನಗರದ ವಿವಿಧೆಡೆ ಅತಿ ಅವಶ್ಯ ಇರುವಲ್ಲಿ ಹಾಗೂ ಸಾವಿರಾರು ಪ್ರಯಾಣಿಕರು ಬಂದು ನಿಲ್ಲುವಲ್ಲಿ ಬಸ್ ತಂಗುದಾಣ ನಿರ್ಮಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಹಲವು ಕಡೆ ತಂಗುದಾಣವಿಲ್ಲ:  ಪಿವಿಎಸ್ ವೃತ್ತದಂತೆಯೇ ಅಂಬೇಡ್ಕರ್ ವೃತ್ತದಿಂದ ಬಂಟ್ಸ್‌ಹಾಸ್ಟೆಲ್ ಕಡೆಗೆ ಬರುವಲ್ಲಿ, ಬಂಟ್ಸ್‌ಹಾಸ್ಟೇಲ್ ವೃತ್ತದಲ್ಲಿ ಪಿವಿಎಸ್ ಕಡೆಗೆ ಬರುವಲ್ಲಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಯಾಣಿಕರು ರಸ್ತೆ ಬದಿ, ಫುಟ್‌ಪಾತ್‌ಗಳಲ್ಲಿ ಬಸ್‌ಗಳಿಗೆ ಕಾಯುತ್ತಿರುತ್ತಾರೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಇಲ್ಲಿ ನಿಲ್ಲಲು ಭಾರಿ ಕಷ್ಟವಾಗುತ್ತಿದೆ. ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿಗೂ ಸ್ಮಾಟ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು.

ವಿಎಸ್ ವೃತ್ತ ನಗರದ ಹೃದಯ ಭಾಗದಲ್ಲಿರುವುದರಿಂದ ಮತ್ತು ಎಲ್ಲ ಊರುಗಳಿಗೆ ಹೋಗುವ ಹಾಗೂ ಬರುವ ಬಸ್‌ಗಳು ಈ ಮೂಲಕವೇ ಸಾಗುತ್ತವೆ. ಹಾಗಾಗಿ ಹೆಚ್ಚಿನ ಪ್ರಯಾಣಿಕರು ಬಸ್‌ಗಳಿಗೆ ಫುಟ್‌ಪಾತ್‌ನಲ್ಲಿ ಬಸ್‌ಗಳಿಗೆ ಕಾಯುವ ಸ್ಥಿತಿ ಇದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಪಿವಿಎಸ್ ಬಳಿಗೆ ಉತ್ತಮ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಬೇಕು.
ಹರಿಪ್ರಸಾದ್ ಮಂಗಳೂರು ಖಾಸಗಿ ಉದ್ಯೋಗಿ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹೊಸ ವಿನ್ಯಾಸದೊಂದಿಗೆ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗುತ್ತಿದೆ. ಕೆಲವು ಕಡೆ ಜಾಗದ ಸಮಸ್ಯೆಯಿಂದ ಅವಶ್ಯಕತೆ ಇರುವಲ್ಲಿ ತಂಗುದಾಣ ನಿರ್ಮಾಣಕ್ಕೆ ತೊಡಕಾಗಿದೆ. ಪಿವಿಎಸ್ ವೃತ್ತದಲ್ಲಿ ತಂಗುದಾಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು.
ಬಿ.ಎಚ್.ನಾರಾಯಣಪ್ಪ ಮನಪಾ ಆಯುಕ್ತರು