24ರಿಂದ ಫುಟ್ಬಾಲ್ ಟೂರ್ನಿ

ಮಡಿಕೇರಿ: ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಫುಟ್ಬಾಲ್ ಗೋಲ್ಡ್ ಕಪ್‌ನ 24ನೇ ವರ್ಷದ ಪಂದ್ಯಾವಳಿಯನ್ನು ಬ್ಲೂಬಾಯ್ಸ ಯುವಕ ಸಂಘದ ವತಿಯಿಂದ ಮೇ 24ರಿಂದ ಜೂ.2ರವರೆಗೆ ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ರಾಜ್ಯವ್ಯಾಪಿಯ 22 ತಂಡಗಳು ಪಾಲ್ಗೊಳ್ಳಲಿದ್ದು, ಮೇ 24ರಂದು ಮಧ್ಯಾಹ್ನ 3 ಗಂಟೆಗೆ ಪಂದ್ಯಾವಳಿಯನ್ನು ಕಾಫಿ ಉದ್ಯಮಿ ವಿಶಾಲ್ ಶಿವಪ್ಪ ಉದ್ಘಾಟಿಸಲಿದ್ದಾರೆ. ಹಾಸನ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಕುಶಾಲನಗರದ ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ, ದಾನಿಗಳಾದ ಡಿ.ವಿನೋದ್ ಶಿವಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಥಮ ಪಂದ್ಯಾಟವು ಆತಿಥೇಯ ಬ್ಲೂಬಾಯ್ಸ ಯುವಕ ಸಂಘ ಮತ್ತು ಪನ್ಯ ತಂಡಗಳ ನಡುವೆ ಜರುಗಲಿದೆ. ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ 30,000 ನಗದು, ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ 20 ಸಾವಿರ ನಗದು, ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನ ಸಿಗಲಿದೆ ಎಂದರು.

ಪಂದ್ಯಾವಳಿಯಲ್ಲಿ ಬೆಂಗಳೂರಿನ 2, ಮಂಡ್ಯದ 2, ಮೈಸೂರಿನ 4, ಕೇರಳದ ಕ್ಯಾಲಿಕಟ್, ಕೂತುಪರಂಬ, ಕುಂಬಳ, ಉಪ್ಪಳ, ನಂಜನಗೂಡು, ಹಾಸನ, ಕೆಜಿಎಫ್‌ನ ವಾರಿಯರ್ಸ್ ಫುಟ್ಬಾಲ್ ಕ್ಲಬ್, ಕೊಡಗು ಇಲೆವೆನ್, ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ, ಗದ್ದೆಹಳ್ಳದ ಓಮಿಟಿ ತಂಡ, ಆತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ ಯೂತ್ ಕ್ಲಬ್ ತಂಡವೂ ಸೇರಿದಂತೆ ಸುಮಾರು 22 ತಂಡಗಳು ಪಾಲ್ಗೊಳ್ಳುತ್ತಿದೆ. ಪ್ರತಿ ನಿತ್ಯ 2 ಪಂದ್ಯಾಟ ನಡೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲೂಬಾಯ್ಸ ಯುವಕ ಸಂಘದ ಅಧ್ಯಕ್ಷ ಎನ್.ಎಸ್. ಆದಿಶೇಷ, ಖಚಾಂಚಿ ಕೆ.ಕೆ. ವಾಸುದೇವ್, ಕ್ರೀಡಾಕಾರ್ಯದರ್ಶಿ ಅನಿಲ್, ಪಂದ್ಯಾವಳಿ ಆಯೋಜಕ ವಿನೋದ್ ಶಿವಪ್ಪ ಇದ್ದರು.

Leave a Reply

Your email address will not be published. Required fields are marked *