ಫುಟ್‌ಬಾಲ್ ಮೈದಾನದ ಬೇಲಿ ದಿಕ್ಕಾಪಾಲು!

ವೇಣುವಿನೋದ್ ಕೆ.ಎಸ್ ಮಂಗಳೂರು

ನಗರದ ಪುರಭವನ ಬಳಿಯ ಫುಟ್‌ಬಾಲ್ ಮೈದಾನದ ಸುತ್ತ ಸುರಕ್ಷತೆ ದೃಷ್ಟಿಯಿಂದ ಹಾಕಲಾಗಿದ್ದ ತಂತಿಯ ಬಲೆ ಬೇಲಿ ಅಲ್ಲಲ್ಲಿ ತುಂಡಾಗಿದ್ದು, ಕ್ರೀಡಾಳುಗಳ ಸುರಕ್ಷತೆಗೆ ಸವಾಲೊಡ್ಡಿದೆ.
ಮೇಲ್ಭಾಗದ ನೆಹರು ಮೈದಾನ, ಕೆಳಭಾಗದ ಫುಟ್‌ಬಾಲ್ ಮೈದಾನದ ಸುರಕ್ಷತೆ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ಕಬ್ಬಿಣದ ಸ್ತಂಭಗಳನ್ನು ಹಾಕಿ, ಸುತ್ತಲೂ ಲೋಹದ ತಂತಿ ಬಲೆಯ ಬೇಲಿಯನ್ನು ಸುಮಾರು 7 ಅಡಿ ಎತ್ತರಕ್ಕೆ ಹಾಕಲಾಗಿತ್ತು. ಒಳಗೆ ಆಟಗಾರರು ಯಾವುದೇ ಕಿರಿಕಿರಿಯಿಲ್ಲದೆ ಫುಟ್‌ಬಾಲ್ ಆಡುವುದಕ್ಕೆ ಸಾಧ್ಯವಾಗುತ್ತಿತ್ತು.
ಸದ್ಯ ಈ ಬಲೆ ಬೇಲಿ ಅಲ್ಲಲ್ಲಿ ತುಂಡಾಗಿದೆ. ಕೆಲವು ಕಡೆ ತುಕ್ಕುಹಿಡಿದು ನೇತಾಡುತ್ತಿದೆ. ಹೀಗಾಗಿ ಅವಶ್ಯಕತೆ ಇಲ್ಲದವರೂ ನೇರವಾಗಿ ಮೈದಾನಕ್ಕೆ ಇಳಿಯುವಂತಾಗಿದೆ. ಸದ್ಯ ಭಿಕ್ಷುಕರು ಕುಡುಕರು ಈ ಬೇಲಿಯ ಅಂಚಿನಲ್ಲಿ ಕುಳಿತಿರುವುದು ಸಾಮಾನ್ಯ ದೃಶ್ಯ.
ನೆಹರು ಮೈದಾನದ ಸುತ್ತಲೂ ಈಗಾಗಲೇ ಗಟ್ಟಿಯಾದ ಎತ್ತರದ ಲೋಹದ ಕಂಬಿಗಳಿರುವ ಆವರಣ ಬೇಲಿಯನ್ನೇ ಹಾಕಲಾಗಿದೆ. ಇದು ದೃಢವಾಗಿರುವುದು ಯಾವುದೇ ಸಮಸ್ಯೆ ಇಲ್ಲ. ಈ ಬೇಲಿ ವ್ಯವಸ್ಥೆಯನ್ನು 15 ವರ್ಷಗಳ ಹಿಂದೆಯೇ ಹಾಕಲಾಗಿತ್ತು. ಆದರೆ ಅದು ಆಗಾಗ ಕಿತ್ತು ಹೋಗುತ್ತಲೆ ಇರುತ್ತದೆ. ಫುಟ್‌ಬಾಲ್ ಆಟವಾಡುವ ಕಾರಣ ಮೆಷ್ ಬಲೆ ಹಾಕುವುದೇ ಹೆಚ್ಚು ಸೂಕ್ತ. ಆದರೆ ಗುಣಮಟ್ಟದ್ದು ಹಾಕಿದರೆ ಉತ್ತಮ ಎನ್ನುತ್ತಾರೆ ಫುಟ್‌ಬಾಲ್ ಸಮಿತಿ ಅಧ್ಯಕ್ಷ ಡಿ.ಎಂ.ಅಸ್ಲಂ.
ಈ ಬಾರಿಯ ಚುನಾವಣಾ ಪ್ರಚಾರಕ್ಕೆಂದು ಪ್ರಧಾನಿ ಮೋದಿಯವರ ಸಮಾವೇಶ ಇದೇ ಮೈದಾನದಲ್ಲಿ ಹಾಕಲಾಗಿತ್ತು. ಆ ವೇಳೆ ಸುರಕ್ಷತಾ ಉದ್ದೇಶಕ್ಕೆಂದು ಆಗಲೇ ಹರಿದು ಹೋಗಿದ್ದ ಮೆಷ್ ಬೇಲಿಯನ್ನೇ ಅಲ್ಲಲ್ಲಿ ಮಂಗಳೂರು ಮನಪಾ ಅಧಿಕಾರಿಗಳೇ ಕಿತ್ತು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಮತ್ತೆ ಹಾಕಿಲ್ಲ. ಅಲ್ಲದೆ ಪುರಭವನ ಬದಿಯ ಫುಟ್‌ಬಾಲ್ ಗೋಲ್‌ಪೋಸ್ಟ್ ಕೂಡ ಪ್ರಧಾನಿ ಕಾರ್ಯಕ್ರಮಕ್ಕೆಂದು ತೆಗೆಯಲಾಗಿದೆ. ಆದರೆ ಇನ್ನೂ ಕೂಡಾ ಹಾಕುವ ಗೋಜಿಗೆ ಮನಪಾ ಹೋಗಿಲ್ಲ.

ಫುಟ್‌ಪಾತ್ ಕೆಲಸವೂ ಬಾಕಿ:  ಮೈದಾನ ರಸ್ತೆಯ ಬದಿಯ ಫುಟ್‌ಪಾತ್ ಚರಂಡಿ ಸುಧಾರಣೆ ಕೆಲಸವೂ ಚುರುಕು ಪಡೆದಿಲ್ಲ. ಮಳೆಯಾದರೆ ಇದೆಲ್ಲವೂ ಅಧ್ವಾನ ಸೃಷ್ಟಿಸುವ ಸಾಧ್ಯತೆ ಇದೆ. ಚರಂಡಿ ತೆರೆದು ಹಾಕಲಾಗಿದ್ದು, ಅದರಲ್ಲೆಲ್ಲ ತ್ಯಾಜ್ಯ ಸೇರಿಕೊಂಡಿದೆ. ಫುಟ್‌ಪಾತ್ ಅಭಿವೃದ್ಧಿಗಾಗಿ ಅಗೆಯಲಾಗಿದ್ದು, ಅಲ್ಲಿರುವ ಮರಗಳ ಬುಡ ಸಡಿಲಗೊಂಡಿರುವುದು ಕಂಡುಬರುತ್ತದೆ. ಅಲ್ಲಿಗೆ ಇಂಟರ್‌ಲಾಕ್ ಹಾಕಿ ಗಟ್ಟಿಗೊಳಿಸದೇ ಹೋದರೆ ಗಾಳಿ ಮಳೆಗೆ ಮರಗಳು ಧರಾಶಾಯಿಯಾಗುವ ಸಾಧ್ಯತೆ ಇದೆ.

ಫುಟ್‌ಬಾಲ್ ಮೈದಾನದ ಅಭಿವೃದ್ಧಿಗೆ ಮೊದಲು ಪಿಡಬ್ಲೂೃಡಿಯಿಂದ 1 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು, ಆದರೆ ಆ ಬಳಿಕ ಸ್ಮಾರ್ಟ್‌ಸಿಟಿಯಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ, ನಮಗೆ ಬಂದಿದ್ದ 1 ಕೋಟಿ ರೂ. ನಾವು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಮರಳಿಸಿದ್ದೇವೆ. ಆದರೆ ಮಾಮೂಲಿ ಬೇಲಿಯಂತಹ ನಿರ್ವಹಣಾ ಕಾಮಗಾರಿಯನ್ನು ಮನಪಾದವರೇ ಕೈಗೊಳ್ಳಬೇಕು.
ಯಶವಂತ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್

Leave a Reply

Your email address will not be published. Required fields are marked *