ಚನ್ನರಾಯಪಟ್ಟಣ: ರಕ್ತ ಪರಿಚಲನೆ ಮತ್ತು ನರಗಳಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲಿಕ ಸಮಸ್ಯೆಗಳ ಪರಿಹಾರಕ್ಕೆ ಫೂಟ್ ಪಲ್ಸ್ ಥೆರಪಿ ಚಿಕಿತ್ಸೆ ಸಹಕಾರಿ ಎಂದು ಕಂಪಾನಿಯೋ ಸಂಸ್ಥೆ ಮುಖ್ಯಸ್ಥ ರೋಹಿತ್ ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಹಾಗೂ ಕಂಪಾನಿಯೋ ಸಹಯೋಗದಲ್ಲಿ ಶನಿವಾರ ಎಪಿಎಂಸಿ ಎದುರಿನ ಸಭಾಂಗಣದಲ್ಲಿ ಆಯೋಜಿಸಿದ್ದ ಫೂಟ್ ಪಲ್ಸ್ ಥೆರಪಿ ಉಚಿತ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಕೇವಲ 15 ದಿನಗಳ ಚಿಕಿತ್ಸೆ ಪಡೆದರೆ ಶುಗರ್, ಬಿಪಿ, ಸ್ನಾಯುಸೆಳೆತ, ಸಂದಿವಾತ, ನಿದ್ರಾಹೀನತೆ, ಬೆನ್ನು ನೋವು, ಮಂಡಿನೋವು, ಪಾರ್ಶ್ವವಾಯು, ಥೈರಾಯ್ಡ ಸೇರಿ ಇನ್ನಿತರ ನರಗಳಿಗೆ ಸಂಬಂಧಿಸಿದ ಹಲವು ರೋಗಗಳಿಂದ ಗುಣಮುಖರಾಗಬಹುದು ಎಂದು ತಿಳಿಸಿದರು.
ಅರ್ಧ ತಾಸು ಚಿಕಿತ್ಸೆ ಪಡೆದರೆ 5 ಕಿ.ಮೀ.ವರೆಗೆ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಈ ಚಿಕಿತ್ಸೆ ಸಹಕಾರಿಯಾಗುತ್ತದೆ. ನರ ರೋಗಗಳಿಗೆ ಸಂಬಂಧಿಸಿ ಸಣ್ಣ ಮತ್ತು ದೀರ್ಘಕಾಲಿಕ ಸಮಸ್ಯೆಗಳನ್ನು ಔಷಧರಹಿತವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಹರಿಸಬಹುದು. ಪ್ರತಿಯೊಬ್ಬರೂ ಉಚಿತವಾಗಿ ಚಿಕಿತ್ಸೆ ಪಡೆಯಬೇಕು ಎಂಬುದು ಸಂಸ್ಥೆ ಮುಖ್ಯ ಉದ್ದೇಶ ಎಂದು ಹೇಳಿದರು.
ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ಅಧ್ಯಕ್ಷ ಬಿ.ವಿ. ವಿಜಯ್ ಕುಮಾರ್ ಮಾತನಾಡಿ, ಕಂಪಾನಿಯೋ ಸಂಸ್ಥೆ ಸಹಕಾರದಿಂದ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ರೂಪಿಸುತ್ತಿದೆ. ಆರೋಗ್ಯ, ರಕ್ತದಾನ, ನೇತ್ರ ಚಿಕಿತ್ಸೆ ಮತ್ತಿತರ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದರು.
ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್‌ನ ವಲಯ ಸೇನಾನಿ ಜಯ ರಾಘವೇಂದ್ರ, ಖಜಾಂಚಿ ನಟರಾಜ್, ಕಾರ್ಯದರ್ಶಿ ಡಾ.ಎಸ್.ಎಸ್.ಕುಮುದಾ, ಮಾಜಿ ಸಹಾಯಕ ಪ್ರಾಂತಪಾಲ ಪದ್ಮನಾಭ, ಸದಸ್ಯರಾದ ಜ್ಯೋತಿ, ಪರಮೇಶ್, ಫಿಜಿಯೋಥೆರಪಿಸ್ಟ್ ಮೇಘನಾ ಇತರರು ಇದ್ದರು.