ಆಹಾರ ಸೇವಿಸಿದ ಬಳಿಕ ಹೊಟ್ಟೆನೋವು 13 ಮಕ್ಕಳು ಸರ್ಕಾರಿ ಆಸ್ಪತ್ರೆಗೆ ದಾಖಲು

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕಡಿರುದ್ಯಾವರ ಗ್ರಾಮದಲ್ಲಿರುವ ಮಕ್ಕಳ ಪಾಲನಾ-ಪೋಷಣಾ ಕೇಂದ್ರದ ಮಕ್ಕಳಲ್ಲಿ ಸೋಮವಾರ ಮಧ್ಯಾಹ್ನ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು 13 ಮಕ್ಕಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಶ್ವಿನಿ, ಚೈತ್ರಾ, ಪೂಜಾ, ಕಾವ್ಯ, ನಿಶಾ, ಸ್ವಾತಿ, ವಂದನ್, ನವ್ಯಕಲಾ, ಪ್ರಣಮ್ಯ, ಬಿಂದುಶ್ರೀ, ತ್ರಿಶಾ, ಅನುಶ್ರೀ ಹಾಗೂ ಡಿಂಪಲ್ ಆಸ್ಪತ್ರೆಗೆ ದಾಖಲಾದವರು.

ಸೋಮವಾರ ಬೆಳಗ್ಗೆ ಮಕ್ಕಳು ಗಂಜಿ ಊಟ ಸೇವಿಸಿ ಶಾಲೆಗೆ ತೆರಳಿದ್ದು, ಮಧ್ಯಾಹ್ನ ಶಾಲೆಯಲ್ಲಿ ಊಟ ಮಾಡಿದ್ದಾರೆ. ಕಾಲೇಜಿಗೆ ತೆರಳುವ ಮಕ್ಕಳು ಕೇಂದ್ರದಿಂದ ಬುತ್ತಿ ಕೊಂಡುಹೋಗಿದ್ದಾರೆ. ಈ ಮಕ್ಕಳಿಗೆ ಸಾಯಂಕಾಲ ಹೊಟ್ಟೆನೋವು ಹಾಗೂ ವಾಂತಿ ಆರಂಭಗೊಂಡಿದ್ದು, ಆಹಾರ ವ್ಯತ್ಯಯದಿಂದ ಹೀಗಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಹಾರ ಇಲಾಖೆ ತಂಡ ಭೇಟಿ: ಕೇಂದ್ರಕ್ಕೆ ಈಗಾಗಲೇ ಆಹಾರ ಇಲಾಖೆ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಮಕ್ಕಳ ಆರೋಗ್ಯ ಉತ್ತಮವಾಗಿದ್ದು, ಆತಂಕ ಪಡಬೇಕಿಲ್ಲ. ಆಹಾರದ ಸ್ಯಾಂಪಲ್ ಸಂಗ್ರಹಿಸಿ, ಮೈಸೂರಿಗೆ ಕಳುಹಿಸಲಾಗುತ್ತದೆ ಎಂದು ಟಿಎಚ್‌ಒ ಡಾ.ಕಲಾಮಧು ತಿಳಿಸಿದ್ದಾರೆ.

ನಮ್ಮ ಕೇಂದ್ರಕ್ಕೆ ಅಕ್ಕಿ ಹಾಗೂ ಗೋಧಿ ಸರ್ಕಾರದಿಂದ ಪೂರೈಕೆಯಾಗುತ್ತದೆ. ಈ ಭಾಗದ ಕೆಲವೊಂದು ಮನೆಗಳಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಇದು ಕೇಂದ್ರದ ಆಹಾರದ ಸಮಸ್ಯೆಯಲ್ಲ. ವಾತಾವರಣದ ಸಾಧ್ಯತೆಯೂ ಇರಬಹುದು. ಮಕ್ಕಳು ಈಗ ಆರೋಗ್ಯವಾಗಿದ್ದಾರೆ ಎಂದು ಕೇಂದ್ರದ ಲೋಕೇಶ್ವರಿ ವಿನಯಚಂದ್ರ ತಿಳಿಸಿದ್ದಾರೆ.