ಬಡವರಿಗೆ ವಿಷದೂಟ!

| ಶಂಕರ್ ಖಾಸ್ಭಾಗ್ ದಿಗ್ವಿಜಯ ನ್ಯೂಸ್

ಬೆಂಗಳೂರು: ಬಡವರ ಹಸಿವು ನೀಗಿಸುವ ಸದುದ್ದೇಶದಿಂದ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಅನ್ನಭಾಗ್ಯ ಯೋಜನೆ ಜನರಿಗೆ ವಿಷದ ತುತ್ತಾಗುವ ಆತಂಕ ಎದುರಾಗಿದೆ! ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 247 ಚಾನಲ್ ನಡೆಸಿದ ತನಿಖೆಯಲ್ಲಿ ಈ ಆಘಾತಕಾರಿ ವಿಚಾರ ಬಹಿರಂಗವಾಗಿದೆ.

ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿರುವ ತೊಗರಿ ಬೇಳೆಗೆ ಜೀವಕ್ಕೆ ಸಂಚಕಾರ ತರುವ ಕೇಸರಿ ಬೇಳೆ ಬೆರೆಸಿ ಮಾರಾಟ ಮಾಡುತ್ತಿರುವ ಕಳವಳಕಾರಿ ಸಂಗತಿ ಸಾಕ್ಷ್ಯಸಮೇತ ಬಯಲಾಗಿದೆ.

ಏನಿದು ಕೇಸರಿ ಬೇಳೆ?: ಕೇಸರಿ ಬೇಳೆ ಮೇಲ್ನೋಟಕ್ಕೆ ಚೆನ್ನಂಗಿ ಬೇಳೆಯನ್ನೇ ಹೋಲುತ್ತದೆ ಎಂಬ ಕಾರಣಕ್ಕೆ ಜನರನ್ನು ಸುಲಭವಾಗಿ ವಂಚಿಸಲಾಗುತ್ತಿದೆ. ತೊಗರಿ ಬೇಳೆಯಂತೆ ಬಣ್ಣ ಮತ್ತು ಆಕಾರ ಒಂದೇ ರೀತಿ ಇದ್ದರೂ, ರುಚಿಯಲ್ಲಿ ಕೇಸರಿ ಬೇಳೆ ಅತ್ಯಂತ ಕಹಿ. ಇದು ಫಸಲಿನ ಜತೆ ಕಳೆಯಂತೆ ಬೆಳೆಯುವ ಒಂದು ಸಸ್ಯ ಪ್ರಭೇದ. ಯಾವುದೇ ವಾತಾವರಣದಲ್ಲೂ ಈ ಬೆಳೆ ಹುಲುಸಾಗಿ ಬೆಳೆಯುತ್ತದೆ. ಸಾಕಷ್ಟು ಸಂಶೋಧನೆಗಳ ಬಳಿಕ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕೇಸರಿ ಬೇಳೆ ನಿಷೇಧಿಸಲಾಗಿದೆ. ರಾಜ್ಯ ಸರ್ಕಾರ 1963ರಲ್ಲೇ ಇದನ್ನು ನಿರ್ಬಂಧಿಸಿದೆ. ಆದರೆ ಚಂಡೀಗಢ, ಛತ್ತೀಸ್​ಗಢ, ಮಣಿಪುರ ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಕೆಲ ಆನ್​ಲೈನ್ ಸ್ಟೋರ್​ಗಳು ಕೆಜಿಗೆ 23-30 ರೂ.ನಂತೆ ಮಾರಾಟ ಮಾಡುತ್ತಿವೆ.

ಕಲಬೆರಕೆಗೆ ಕಾರಣ?

# ತೊಗರಿ ಬೇಳೆ ಬೆಲೆ ಹೆಚ್ಚಿರುವುದರಿಂದ ಕಡಿಮೆ ಬೆಲೆಯ ಕೇಸರಿ ಬೇಳೆ ಕಲಬೆರಕೆ.

# ವಿಜಯಪುರ, ಬೀದರ್, ಕಲಬುರಗಿ, ಬೆಂಗಳೂರಲ್ಲಿ ಈ ದಂಧೆ ಅವ್ಯಾಹತ.

# ಕಮೀಷನ್​ಗಾಗಿ ಡೀಲರ್​ಗಳು, ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು ಭಾಗಿ.

ನರಮಂಡಲಕ್ಕೆ ಅಪಾಯಕಾರಿ

ಕೇಸರಿ ಬೇಳೆ ಸೇವನೆಯಿಂದ ಲೆಥರಿಸಂ (A Neurotoxic Disease) ಎಂಬ ನರವಿಷದ ಕಾಯಿಲೆ ಬರುತ್ತದೆ. 50 ವರ್ಷಗಳ ಹಿಂದೆ ಈ ಕಾಯಿಲೆ ಮಧ್ಯವಯಸ್ಸಿನ ಪುರುಷರಲ್ಲಿ ಸಾಮಾನ್ಯವಾಗಿತ್ತು. 15 -35 ವರ್ಷದ ಪುರುಷರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಬೆನ್ನುಹುರಿ ಹಾಗೂ ಅಸಹಜ ಬಿಗಿಯುವಿಕೆ ಲಕ್ಷಣಗಳಿಂದ ಶುರುವಾಗುವ ಈ ಕಾಯಿಲೆ, ಕಾಲುಗಳ ನರ ಹಾಗೂ ಮಾಂಸಖಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟುಮಾಡುತ್ತದೆ. ನಡೆಯಲಾಗದೆ ಆಸರೆಗೆ ಕೋಲು ಅವಲಂಬಿಸಬೇಕಾಗುತ್ತದೆ. ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಪಾರ್ಶ್ವವಾಯು ಖಚಿತ. ಕೇಸರಿ ಬೇಳೆ ಪ್ರಾಣಿಗಳಿಗೂ ಅಪಾಯಕಾರಿ.

ಪ್ರಯೋಗಾಲಯ ವರದಿಯಲ್ಲೇ ಉಲ್ಲೇಖ

ತೊಗರಿ ಬೇಳೆಯಲ್ಲಿ ವಿಷಕಾರಿ ಕೇಸರಿ ಬೇಳೆ ಕಲಬೆರಕೆ ಮಾಡುತ್ತಿರುವುದು ಕಲಬುರಗಿಯ ಸರ್ಕಾರಿ ಆರೋಗ್ಯ ಪ್ರಯೋಗಾಲಯದಲ್ಲೇ ಸಾಬೀತಾಗಿದೆ. ಅನ್ನಭಾಗ್ಯ ಯೋಜನೆಯಡಿ ಪೂರೈಕೆಯಾಗುತ್ತಿರುವ ತೊಗರಿ ಬೇಳೆ ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ನಿಯಮ (FSSAI) ಪ್ರಕಾರ ಆರೋಗ್ಯಕ್ಕೆ ಹಾನಿಕರ ಎಂದು ಪ್ರಯೋಗಾಲಯ ವರದಿ ದೃಢಪಡಿಸಿದೆ. ಬೆಂಗಳೂರಿನ ಹಲವೆಡೆ ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗುತ್ತಿರುವ ತೊಗರಿ ಬೇಳೆಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಲ್ಲಿಯೂ ಕೂಡ ಸರ್ಕಾರ ಪೂರೈಸುತ್ತಿರುವ ತೊಗರಿ ಬೇಳೆ ದೋಷಪೂರಿತ ಎಂಬ ವಿಚಾರ ದೃಢಪಟ್ಟಿದೆ.

ಕೇಸರಿ ಬೇಳೆ ಸೇವನೆಯಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅನ್ನಭಾಗ್ಯ, ಮಕ್ಕಳ ಬಿಸಿಯೂಟದಂತಹ ಸಾರ್ವಜನಿಕ ಯೋಜನೆಗೆ ಈ ಬೇಳೆ ಬಳಸುವುದು ಸೂಕ್ತವಲ್ಲ. ಅದನ್ನು ಬಳಸುವ ವಿಧಾನ ಗೊತ್ತಿಲ್ಲದಿದ್ದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಕೇಸರಿ ಬೇಳೆ ಸೇವನೆಯಿಂದ ಲೆಥರಿಸಂ ಎಂಬ ಕಾಯಿಲೆ ಬರುತ್ತದೆ. ಈ ಕಾಯಿಲೆ ನರಗಳ ಮೇಲೆ ಪ್ರಭಾವ ಬೀರುತ್ತದೆ. ಅಡುಗೆಗೆ ಹೆಸರು, ತೊಗರಿ ಬೇಳೆಯನ್ನೇ ಬಳಕೆ ಮಾಡಬೇಕು.

| ಕೆ.ಸಿ. ರಘು ಆಹಾರ ತಜ್ಞ

ಬಿಸಿಯೂಟಕ್ಕೂ ಇದೇ ಬೇಳೆ

ರಾಜ್ಯಾದ್ಯಂತ ಕೇಸರಿ ಬೇಳೆ ಮಿಶ್ರಿತ ಹಾಗೂ ಕಳಪೆ ಗುಣಮಟ್ಟದ ಬೇಳೆ ವಿತರಣೆಯಾಗುತ್ತಿದೆ. ಶಾಲೆಗಳ ಬಿಸಿಯೂಟ ಯೋಜನೆಗೂ ಇದೇ ಬೇಳೆ ವಿತರಣೆಯಾಗುತ್ತಿದೆ. ಹಣ ಹಾಗೂ ಕಮೀಷನ್ ಆಸೆಗಾಗಿ ಹಲವರು ಈ ರೀತಿಯ ಕೃತ್ಯಕ್ಕೆ ಕೈಜೋಡಿಸುತ್ತಿದ್ದಾರೆ.

ಚೆನ್ನಂಗಿ ಬೇಳೆ ಹೆಸರಲ್ಲಿ ವಂಚನೆ

ಬಲುರುಚಿಯಾದ ಚೆನ್ನಂಗಿ ಬೇಳೆಗೆ ಈ ಕೇಸರಿ ಬೇಳೆ ಹೋಲಿಕೆಯಾಗುವುದನ್ನು ಸುಲಭವಾಗಿ ಬಳಸಿಕೊಳ್ಳುವ ವಂಚಕರು ಜನರನ್ನು ಯಾಮಾರಿಸುತ್ತಿದ್ದಾರೆ. ಕೆಲ ಹಿರಿಯರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿಲ್ಲ.

One Reply to “ಬಡವರಿಗೆ ವಿಷದೂಟ!”

  1. ರಾಜ್ಯದಲ್ಲಿ ಅಥವಾ ದೇಶದಲ್ಲಿ ಯಾವ ಸರ್ಕಾರ ಅಧಿಕಾರವಿರುವುದೋ ಅವರು ಖಾಸಗಿ ಕಂಪನಿಗಳು ಗ್ರಾಹಕಸೇವಾ ಕೇಂದ್ರ ಅಥವಾ ಗ್ರಾಹಕ ಸೇವಾ ನಂಬರ್ ಗಳನ್ನು ಇಡುವಂತೆ,ಆ ಆ ಸರ್ಕಾರದವರು ಪ್ರಜಾಸೇವಾ ಕೇಂದ್ರಗಳನ್ನು ಸ್ಥಾಪಿಸಬೇಕು.

Comments are closed.